ಹಿಂಜಾವೇ ಪ್ರಮುಖ ಶ್ರೀಕಾಂತ ಶೆಟ್ಟಿಗೆ ನಿರ್ಬಂಧ

Shrikanth
Published on

3 ತಿಂಗಳು ಪ್ರವೇಶ ನಿಷೇಧಿಸಿ ಬಾಗಲಕೋಟೆ ಜಿಲ್ಲಾಡಳಿತ ಆದೇಶ

ವಿಜಯವಾಣಿ ಸುದ್ದಿಜಾಲ ಉಡುಪಿ

ಹಿಂದು ಜಾಗರಣಾ ವೇದಿಕೆ (ಹಿಂಜಾವೇ)ಯ ಹಿಂದು ದಕ್ಷಿಣ ಪ್ರಾಂತ ಪ್ರಮುಖ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರಿಗೆ ಬಾಗಲಕೋಟೆ ಜಿಲ್ಲೆಗೆ ಮುಂದಿನ 3 ತಿಂಗಳು ಪ್ರವೇಶ ನಿರ್ಬಂಧಿಸಿ ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜೂ.20ರಿಂದ ಸೆ.20ರ ವರೆಗೆ ಬಾಗಲಕೋಟೆ ಜಿಲ್ಲಾದ್ಯಂತ ಪ್ರವೇಶ ನಿರಾಕರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮುಧೋಳದಲ್ಲಿ ಕಾರ್ಯಕ್ರಮ

ಬಾಗಲಕೋಟೆ ಜಿಲ್ಲೆಯ ಅತಿಸೂಕ್ಷ್ಮ ಪ್ರದೇಶವಾದ ಮುಧೋಳ ಶಹರದಲ್ಲಿರುವ ಶಿವಾಜಿ ನಗರದಲ್ಲಿ ಹಿಂದು ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ ಅವರ ಕಂಚಿನ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 15 ಸಾವಿರಕ್ಕೂ ಅಧಿಕ ಹಿಂದು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮುಖ್ಯ ಭಾಷಣಕಾರರಾಗಿ ಶ್ರೀಕಾಂತ ಶೆಟ್ಟಿ ಪಾಲ್ಗೊಳ್ಳಲಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಕೋಮು ಸಾಮರಸ್ಯಕ್ಕೆ ಧಕ್ಕೆ ಹಿನ್ನೆಲೆ

ಮುಧೋಳ ಶಹರವು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಮತೀಯವಾಗಿ ಸಣ್ಣ ಘಟನೆ ಸಂಭವಿಸಿದರೂ ರಾಜ್ಯ, ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರ ಪಡೆಯುತ್ತದೆ. ಬಳಿಕ ವಿವಿಧ ಅನ್ಯ ಧಮೀರ್ಯ ನಾಯಕರು ಭೇಟಿ ನೀಡಿ ಭಾಷಣ ಮಾಡುವುದರಿಂದ ಸಾಮರಸ್ಯದ ಜೀವನಕ್ಕೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವ ಇರುತ್ತದೆ. ಮುಧೋಳದಲ್ಲಿದ್ದ ಮತೀಯ ದ್ವೇಷಮಯ ವಾತಾವರಣ ತಿಳಿಯಾಗುತ್ತಿದ್ದು, ಉಭಯ ಕೋಮಿನವರು ಹಿಂದಿನ ಕಹಿ ಘಟನೆ ಮರೆತು ಸಾಮರಸ್ಯದಿಂದ ಇದ್ದಾರೆ. ಮತ್ತೆ ಈ ಪ್ರದೇಶದಲ್ಲಿ ಶ್ರೀಕಾಂತ ಶೆಟ್ಟಿ ಪ್ರಚೋದನಕಾರಿ ಭಾಷಣ ಮಾಡಿ, ಕೋಮು ಸಾಮರಸ್ಯ ಹದಗೆಡಬಹುದು. ಅವರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿವಿಧೆಡೆ ಪ್ರಕರಣವೂ ದಾಖಲಾಗಿದೆ ಎಂಬ ಒಕ್ಕಣೆ ಜಿಲ್ಲಾಡಳಿತದ ಆದೇಶದಲ್ಲಿದೆ.

ರಾಷ್ಟ್ರವಾದಿ ಹಿಂದು ನಾಯಕರ ಧ್ವನಿ ಹತ್ತಿಕ್ಕುವ ಕಾರ್ಯವಿದು. ಕೋಮು ಪ್ರಚೋದನೆ ಮಾಡಿದ ಬೇರಾವುದೇ ಅನ್ಯ ಮತೀಯ ಸಂಘಟನೆಗಳ ಮುಖಂಡರ ವಿರುದ್ಧ ರಾಜ್ಯ ಕಾಂಗ್ರೆಸ್​ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ರಾಜಕೀಯ ದಾಳಗಳಾಗಿ ಕೆಲಸ ನಿರ್ವಹಿಸದೆ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ನನಗೆ ವಿಧಿಸಿದ ನಿರ್ಬಂಧ ರಾಜಕೀಯ ಪ್ರೇರಿತ. ಸರ್ಕಾರದ ಈ ಕ್ರಮದ ವಿರುದ್ಧ ಹೈಕೋರ್ಟ್​ ಮೊರೆ ಹೋಗಲಿದ್ದೇವೆ. ಬಳಿಕ ಬಾಗಲಕೋಟೆಗೆ ತೆರಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವವನಿದ್ದೇನೆ. | ಶ್ರೀಕಾಂತ ಶೆಟ್ಟಿ ಕಾರ್ಕಳ. ಹಿಂದು ದಕ್ಷಿಣ ಪ್ರಾಂತ ಪ್ರಮುಖ, ಹಿಂಜಾವೇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net