ಗರುಡಾ ಗ್ಯಾಂಗ್​ ಸದಸ್ಯ ಕಬೀರ್​ ಬಂಧನ...

Kabir
Published on

ಗೂಂಡಾ ಕಾಯಿದೆಯಡಿ ವಶ

ಮೈಸೂರು ಜೈಲಿಗೆ ರವಾನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಾಪು ಗರುಡಾ ಗ್ಯಾಂಗ್​ನ ಸಕ್ರಿಯ ಸದಸ್ಯನಾಗಿದ್ದ ಕಬೀರ್​ ಅಲಿಯಾಸ್​ ಕಬೀರ್​ ಹುಸೇನ್​ (46) ಎಂಬಾತನನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಜು.10ರಂದು ಬಂಧಿಸಿದ್ದಾರೆ.

ಕಾರ್ಕಳದ ಕಂಪನ ಕೌಡೂರು ಗ್ರಾಮದ ಕಬೀರ್​, 2005ನೇ ಇಸವಿಯಿಂದ ಈವರೆಗೆ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಜಾನುವಾರು ಕಳವು, ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಸೇರಿದಂತೆ 17 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅವುಗಳ ಪೈಕಿ ಈಗಾಗಲೇ ಎರಡು ಪ್ರಕರಣಗಳಲ್ಲಿ ಶಿೆ ಅನುಭವಿಸಿದ್ದು, 8 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾನೆ. ಮೂರು ಪ್ರಕರಣ ರಾಜಿ ಮಾಡಿಕೊಂಡಿದ್ದು, ನ್ಯಾಯಾಲಯದಲ್ಲಿ ಎರಡು ಪ್ರಕರಣ ವಿಚಾರಣೆಯಲ್ಲಿದೆ. ಇನ್ನುಳಿದ ಎರಡು ಪ್ರಕರಣ ಪೊಲೀಸ್​ ತನಿಖೆಯಲ್ಲಿದೆ.

ಉಡುಪಿ ಜಿಲ್ಲೆಯ ಕಾರ್ಕಳ ನಗರ, ಹಿರಿಯಡ್ಕ, ಪಡುಬಿದ್ರಿ, ಮಣಿಪಾಲ, ಶಿರ್ವ, ಕಾಪು ಠಾಣಾ ವ್ಯಾಪ್ತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಉಡುಪಿ ಜಿಲ್ಲೆಯಲ್ಲಷ್ಟೇ ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು, ಮಂಗಳೂರು ನಗರ, ಸುರತ್ಕಲ್​ ಠಾಣಾ ವ್ಯಾಪ್ತಿಯ ಪ್ರಕರಣಗಳಲ್ಲೂ ಭಾಗಿಯಾಗಿದ್ದಾನೆ.

ಉಡುಪಿ ಜಿಲ್ಲಾಧಿಕಾರಿ ಅವರ ಆದೇಶದಂತೆ ಗೂಂಡಾ ಕಾಯಿದೆಯಡಿ ಕಬೀರ್​ ಅಲಿಯಾಸ್​ ಕಬೀರ್​ ಹುಸೇನ್​ನನ್ನು ಬಂಧಿಸಲಾಗಿದ್ದು, ಮೈಸೂರು ಕೇಂದ್ರ ಕಾರಾಗೃಹಕ್ಕೆ ಸಾಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net