ನದಿಯಲ್ಲಿ ಬಿದ್ದಿದ್ದ 45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹುಡುಕಿಕೊಟ್ಟ ಈಶ್ವರ ಮಲ್ಪೆ

Malpe Lead
Published on

 ಅಪಘಾತಕ್ಕೊಳಗಾಗಿದ್ದ ಕಾರು

ಮಾಲೀಕ ಜೀವಾಪಾಯದಿಂದ ಪಾರು

ವಿಜಯವಾಣಿ ಸುದ್ದಿಜಾಲ ಉಡುಪಿ

ನಿಯಂತ್ರಣ ತಪ್ಪಿ ನದಿಯಲ್ಲಿ ಬಿದ್ದ ಕಾರಿನಲ್ಲಿದ್ದ ಸುಮಾರು 45 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಹುಡುಕಿ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಉಡುಪಿಯ ಮುಳುಗುತಜ್ಞ ಈಶ್ವರ ಮಲ್ಪೆ ಗಮನ ಸೆಳೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬೇಲೂರು ರಸ್ತೆ ಮಾರ್ಗದಲ್ಲಿ ಅ.27ರಂದು ಬೆಳಗ್ಗೆ ಸಾಗುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ನದಿಗೆ ಉರುಳಿ ಬಿದ್ದಿತ್ತು. ಕಾರಿನಲ್ಲಿದ್ದ ಹರಿಹರ ಸಮೀಪದ ಮಲೆಬೆನ್ನೂರು ಗ್ರಾಮದ ಸದಾನಂದ ಎಂಬವರು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಪತ್ನಿಗೆ ಸಂಬಂಧಿಸಿದ ಆಭರಣಗಳನ್ನು ಕಾರಿನಲ್ಲಿಟ್ಟುಕೊಂಡು ಬೆಳೂರಿನಲ್ಲಿದ್ದ ಪತ್ನಿಯ ತವರುಮನೆಗೆ ಪ್ರಯಾಣಿಸುತ್ತಿದ್ದರು.ಈ ವೇಳೆ ಬ್ರೇಕ್​ ಫೇಲ್​ ಆಗಿದ್ದು, ನಿಯಂತ್ರಣ ತಪ್ಪಿದ ಕಾರು ನದಿಗೆ ಉರುಳಿತ್ತು. ಕಾರಿನೊಳಗೆ ಇದ್ದ ಸುಮಾರು 45 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಆಭರಣಗಳಿದ್ದ ಕೆಂಪು ಬಟ್ಟೆಯ ಚೀಲ ನದಿಯೊಳಗೆ ಬಿದ್ದಿತ್ತು.

15 ನಿಮಿಷದಲ್ಲಿ ಆಭರಣ ಪತ್ತೆ!!

Gold
ಆಪದ್ಬಾಂಧವ ಖ್ಯಾತಿಯ ಮುಳುಗುತಜ್ಞ ಉಡುಪಿಯ ಈಶ್ವರ ಮಲ್ಪೆ ಅವರಿಗೆ ಸದಾನಂದ ಅವರು ಕರೆ ಮಾಡಿ ನದಿಯಲ್ಲಿ ಬಿದ್ದಿರುವ ಚಿನ್ನದ ಆಭರಣ ಹುಡುಕಿಕೊಡಬಹುದೇ ಎಂದು ವಿನಂತಿಸಿದ್ದರು. ತನ್ನ ತಂಡದೊಂದಿಗೆ ಸ್ಥಳಕ್ಕಾಗಮಿಸಿದ ಈಶ್ವರ್​ ಮಲ್ಪೆ, ಸುರಾ ಪರಿಕರಗಳನ್ನು ಧರಿಸಿ, ಕಾರು ಬಿದ್ದಿದ್ದ ಸ್ಥಳಕ್ಕೆ ಬ್ಯಾಟರಿಯೊಂದಿಗೆ ನದಿಗೆ ಇಳಿದು ಹುಡುಕಾಟ ನಡೆಸಿದರು. ಮಳೆಯಿಂದಾಗಿ ನದಿ ನೀರು ಕೆಂಪುಮಯವಾಗಿತ್ತು. ಹುಡುಕಾಟಕ್ಕೆ ತುಸು ತೊಂದರೆಯಾದರೂ ಸಹ ನದಿಯ ಆಳದಲ್ಲಿ ಬಿದ್ದಿದ್ದ ಚಿನ್ನದ ಆಭರಣವಿದ್ದ ಚೀಲವನ್ನು ಕೇವಲ 15 ನಿಮಿಷದಲ್ಲಿ ಪತ್ತೆ ಮಾಡಿ ಮೇಲಕ್ಕೆ ತಂದರು. ಚಿನ್ನ ಕಳೆದುಕೊಂಡಿದ್ದ ಮಾಲೀಕರಿಗೆ ಅದನ್ನು ಹಸ್ತಾಂತರಿಸಿದ ಮಲ್ಪೆ, ಭರವಸೆಯ ನಗು ಬೀರಿದರು.

ಪತ್ನಿಯ ತವರು ಮನೆಗೆ ಕಾರಿನಲ್ಲಿ ಒಬ್ಬನೇ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ನದಿಗೆ ಬಿದ್ದಿತು. ಈಜು ಬರುವುದರಿಂದ ಪ್ರಾಣಾಪಾಯದಿಂದ ನಾನು ಪಾರಾದೆ. ಕ್ರೇನ್​ ಮೂಲಕ ಕಾರನ್ನೂ ಮೇಲಕ್ಕೆತ್ತಲಾಯಿತು. ಆದರೆ, ಕಾರಿನೊಳಗೆ ಇದ್ದ ಲಕ್ಷಾಂತರ ರೂ. ಮೌಲ್ಯದ ಆಭರಣವಿದ್ದ ಚೀಲ ನದಿಯೊಳಗೆ ಬಿದ್ದಿತ್ತು. ಅದು ಮರಳಿ ನನಗೆ ಸಿಗುವ ಭರವಸೆ ಖಂಡಿತ ಇರಲಿಲ್ಲ. ಈಶ್ವರ ಮಲ್ಪೆ ಅವರು ಆಭರಣ ಸಿಗುವಂತೆ ಮಾಡಿದ್ದಾರೆ. ನಿಜಕ್ಕೂ ಅವರು ಆಪದ್ಬಾಂಧವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net