

ವಿಜಯವಾಣಿ ಸುದ್ದಿಜಾಲ ಉಡುಪಿ
ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ನಿರಾಸಕ್ತರಾದರೆ ಅವರೊಳಗಿರುವ ಕೌಶಲ ಕಮರಿ ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಕಲೆ, ನೃತ್ಯ, ಸಂಗೀತ, ಯಕ್ಷಗಾನದಂತಹ ಸಾಂಸ್ಕೃತಿಕ ಚಟುವಟಿಕೆಯ ಕುರಿತು ಅಭಿಮಾನ ಮೂಡಿಸಬೇಕು. ಅದರಿಂದ ಮುಂದೆ ಅವರು ಉತ್ತಮ ಕಲಾವಿದರಾಗಲು ಸಾಧ್ಯ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು.ವಿಶ್ವನಾಥ ಶೆಣೈ ಆಶಯ ವ್ಯಕ್ತಪಡಿಸಿದರು.
ಉಡುಪಿ ಇನಾಯತ್ ಆರ್ಟ್ ಗ್ಯಾಲರಿ ವತಿಯಿಂದ ಗಾಂಧಿ ಜಯಂತಿ ನಿಮಿತ್ತ ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಗ್ಯಾಲರಿಯಲ್ಲಿ ಸೋಮವಾರ (ಅ.6) ಉದ್ಘಾಟಿಸಿ ಮಾತನಾಡಿದರು.
ಲಲಿತ ಕಲಾ ಅಕಾಡೆಮಿಯ ಸಹ ಸದಸ್ಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್ ಮತ್ತು ವ್ಯಂಗ್ಯಚಿತ್ರ ಕಲಾವಿದರ ಸಂಘದಿಂದ ಜೀವಮಾನದ ಸಾಧನೆ ಪ್ರಶಸ್ತಿಗೆ ಭಾಜನರಾದ ಕಲಾವಿದ ಜೀವನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಇನಾಯತ್ ಆರ್ಟ್ ಗ್ಯಾಲರಿಯ ಮುಖ್ಯಸ್ಥ ಲಿಯಾಖತ್ ಅಲಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯಕಾರಿ ಸಮಿತಿಯ ಯು.ಜೆ. ದೇವಾಡಿಗ, ಅನಂತ ಶೇಟ್, ಮೋಹನಕೃಷ್ಣ, ನರಸಿಂಹಮೂರ್ತಿ ಮಣಿಪಾಲ, ರಫೀಕ್ ತೋನ್ಸೆ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.