

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ಸಾಂಸ್ಕೃತಿಕ ಕ್ಷೇತ್ರದ ಹಿರಿಯ ಮುಂದಾಳು, ನಿವೃತ್ತ ಉಪನ್ಯಾಸಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ಟ (84) ಮೇ 8ರಂದು ಸಂಜೆ ವಯೋಸಹಜ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಉಡುಪಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೇರುಸ್ವರೂಪರಾಗಿದ್ದ ಕು.ಶಿ. ಹರಿದಾಸ ಭಟ್ಟ ಅವರ ಗರಡಿಯಲ್ಲಿ ಪಳಗಿ, ಧೀಮಂತ ಸಾಂಸತಿಕ ಸಂಘಟಕರಾಗಿ ರೂಪುಗೊಂಡಿದ್ದರು. ಸುಮಾರು 5 ದಶಕಗಳ ಕಾಲ ಉಡುಪಿಯ ಅನೇಕ ಪರ್ಯಾಯೋತ್ಸವ, ವಾದಿರಾಜ-ಕನಕದಾಸ ಸಂಗೀತೋತ್ಸವ, ಹತ್ತಾರು ಸಾಹಿತ್ಯ-ಸಾಂಸ್ಕೃತಿಕ ಹಬ್ಬ, ವಿಶ್ವ ತುಳು ಸಮ್ಮೇಳನಗಳು ಭಟ್ ಅವರ ಸಂಯೋಜನೆಯಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿದ್ದವು. ನೇಪಥ್ಯಕ್ಕೆ ಸರಿಯುತ್ತಿರುವ ಅನೇಕ ಜನಪದೀಯ ಕಲೆಗಳ ದಾಖಲೀಕರಣಗಳೂ ಇವರ ಮಾರ್ಗದರ್ಶನದಲ್ಲೇ ನಡೆದಿದ್ದವು.
ಉಡುಪಿ ಅಷ್ಟ ಮಠಗಳ ವಿವಿಧ ಗೌರವ ಸಂಮಾನ, 2007ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪುರಸ್ಕಾರ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ತಿಂಗಳೆ ಗರಡಿ ಉತ್ಸವ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಕೃಷ್ಣ ಭಟ್ಟ ಅವರ ಅಂತ್ಯಕ್ರಿಯೆ ಮೇ 9ರಂದು ಬೆಳಗ್ಗೆ 10:30ಕ್ಕೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನಡೆಯಲಿದೆ. ಬೆಳಗ್ಗೆ 9 ರಿಂದ 10ರ ವರೆಗೆ ವಿಬುಧಪ್ರಿಯ ನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.