ಕೆಸವೆ ಕುಟುಂಬದ 'ಕಲಾತ್ಮಿಕ' ಕೈಚಳಕ

ಉಡುಪಿಯ ಶೀರೂರು ವೇದವರ್ಧನ ಶ್ರೀಗಳ ಪರ್ಯಾಯ ದರ್ಬಾರ್​ ವೇದಿಕೆಗೆ ತೆಂಗಿನಗರಿಯಿಂದ ಕಲಾತ್ಮಕ ಕೆಲಸದಲ್ಲಿ ನಿರತ ಕೆಸವೆ ಮನೆತನದ ಮಹಿಳೆಯರು.
ಉಡುಪಿಯ ಶೀರೂರು ವೇದವರ್ಧನ ಶ್ರೀಗಳ ಪರ್ಯಾಯ ದರ್ಬಾರ್​ ವೇದಿಕೆಗೆ ತೆಂಗಿನಗರಿಯಿಂದ ಕಲಾತ್ಮಕ ಕೆಲಸದಲ್ಲಿ ನಿರತ ಕೆಸವೆ ಮನೆತನದ ಮಹಿಳೆಯರು.
Published on

* ಅರಳುಗದ್ದಿಗೆಗೆ ತೆಂಗಿನಗರಿಯ ಚಂದದ ಶೃಂಗಾರ

* ಶೀರೂರು ದರ್ಬಾರ್​ಗೆ 'ಝನೂರ್​' ಅಲಂಕಾರ

ಪ್ರಶಾಂತ ಭಾಗ್ವತ ಉಡುಪಿ
ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ದ್ವೈವಾರ್ಷಿಕ ಪರ್ಯಾಯ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಇದ್ದು, ಸಾಂಪ್ರದಾಯಿಕವಾಗಿ ನಡೆಯುವ ಎಲ್ಲ ಕಾರ್ಯಗಳ ಮೆರಗು ಹೆಚ್ಚಿಸಲು ಶ್ರೀಮಠದಿಂದಲೂ ವಿಶೇಷ ಸಿದ್ಧತೆ ನಡೆದಿದೆ.
ಶೀರೂರು ಶ್ರೀಗಳು ಸರ್ವಜ್ಞ ಪೀಠ ಏರುವ ಪೂರ್ವದಲ್ಲಿ ಬಡಗುಮಾಳಿಗೆಯ ಅರಳುಗದ್ದಿಗೆಯಲ್ಲಿ ಸಾಂಪ್ರದಾಯಿಕ ದರ್ಬಾರ್​ ಮತ್ತು ಅಷ್ಟ ಮಠಗಳ ಯತಿಗಳಿಗೆ ಗಂಧ ಉಪಚಾರ ಮತ್ತು ಮಾಲಿಕಾ ಮಂಗಳಾರತಿ ನಡೆಯಲಿದೆ. ಈ ವಿಧಿ ನಡೆಯಲಿರುವ ವೇದಿಕೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವೆ ಕುಟುಂಬದ ಮಹಿಳಾ ಬಂಧುಗಳು ಸಜ್ಜುಗೊಳಿಸುತ್ತಿದ್ದಾರೆ.

ಕಸವೆಯ ಕಲಾತ್ಮಿಕ ಗ್ರೂಪ್​

ಕೆಸವೆ ಊರಿನಲ್ಲಿರುವ ಕೆಸವೆ ಮನೆತನದ 11 ಮಹಿಳೆಯರು 2013ರಲ್ಲಿ 'ಕಲಾತ್ಮಿಕ ಗ್ರೂಪ್​' ತಂಡ ಕಟ್ಟಿಕೊಂಡಿದ್ದಾರೆ. ಮದುವೆ, ಉಪನಯನ, ಜನ್ಮದಿನ, ಸಂಘ-ಸಂಸ್ಥೆಗಳ ಉದ್ಘಾಟನೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ನೈಸರ್ಗಿಕವಾಗಿ ಲಭ್ಯವಿರುವ ತೆಂಗಿನಗರಿ ಹಾಗೂ ಬಾಳೆಯ ಕಂಬದಿಂದ ಚಿತ್ತಾಕರ್ಷಕ ಹಾಗೂ ಸುಂದರ ವೇದಿಕೆ, ದೀಪ ಕಂಬ ಸಿದ್ಧಪಡಿಸುತ್ತಾರೆ. ಒಂದೇ ಮನೆತನದ ಮಹಿಳಾ ಬಂಧುಗಳ ಕೈಚಳಕ ನೋಡಿರುವ ಶೀರೂರು ವೇದವರ್ಧನ ಶ್ರೀಗಳು, ತಮ್ಮ ಪ್ರಥಮ ಪರ್ಯಾಯಕ್ಕೆ ವೇದಿಕೆ ಸಿದ್ಧಪಡಿಸಲು ಕೆಸವೆ ಮಹಿಳಾ ತಂಡಕ್ಕೆ ಉಡುಪಿಗೆ ಆಹ್ವಾನಿಸಿದ್ದಾರೆ.

10 ಮಂದಿ ಸೊಸೆಯಿಂದಿರು

ಕೆಸವೆ ಮನೆತನದ ಈ ಬಂಧುಗಳಲ್ಲಿ ಮಂಗಳಾ ಪ್ರವೀಣ್​ ಎಂಬವರು ಕುಟುಂಬದ ಪುತ್ರಿಯಾಗಿದ್ದಾರೆ. ಉಳಿದಂತೆ ಶಿಲ್ಪಾ ಗೋಪಾಲಕೃಷ್ಣ, ಅರ್ಚನಾ ರಾಜೇಶ್​, ಸ್ವಾತಿ ಪ್ರವೀಣ್​, ಜಯಚಿತ್ರಾ ಸುಭಾಶ್​, ಭಾಗ್ಯಾ ಶಶಿಧರ್​, ಶುಭಾ ಸುನೀಲ್​, ಭಾರ್ಗವಿ ರಾಘವೇಂದ್ರ, ಪ್ರಭಾ ಶ್ರೀಕಾಂತ್​, ರಚನಾ ಶ್ರೀರಂಗ, ಬೃಂದಾ ಭರತ ಇವರೆಲ್ಲರೂ ಕೆಸವೆ ಮನೆತನದ ಸೊಸೆಯಿಂದಿರು. ಕೃಷಿಕ ಕುಟುಂಬದವರಾದರೂ ಅವರೆಲ್ಲರೂ ಸಹ ವಿದ್ಯಾವಂತರೇ ಆಗಿದ್ದಾರೆ. ಈ ಕಲೆಯಲ್ಲದೆ ಹಪ್ಪಳ, ಸಂಡಿಗೆ, ದೇವರಿಗೆ ಸಮರ್ಪಿಸಲು ಹತ್ತಿಯಿಂದ ತಯಾರಿಸುವ ಗೆಜ್ಜೆ ವಸ್ತ್ರ, ಭಗವದ್ಗೀತೆ ಕಂಠಪಾಠ, ಸಂಗೀತದಲ್ಲಿ ಸಾಧನೆ, ಮಂಡಲ ರಚನೆ, ಹೂವಿನ ಗಾರ್ಡನ್​ ಹೀಗೆ ವಿವಿಧ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಥೈಲ್ಯಾಂಡ್​, ಶ್ರೀಲಂಕಾದ ಜನಪ್ರಿಯ ಕಲೆ

ತೆಂಗಿನಗರಿಯಿಂದ ರಚಿಸುವ ಈ ಕಲೆಯನ್ನು 'ಝನೂರ್​ ಆರ್ಟ್​' ಎಂದು ಕರೆಯುತ್ತಾರೆ.  ಈ ಕಲೆಯು ಥೈಲ್ಯಾಂಡ್​, ಶ್ರೀಲಂಕಾ ದೇಶದ ಜನಪ್ರಿಯವಾದ ಕಲೆಯಾಗಿದೆ. ಅಲ್ಲದೆ, ಅಲ್ಲಿನ ಯಾವುದೇ ಶುಭ ಸಮಾರಂಭಗಳಲ್ಲಿ ತೆಂಗಿನಗರಿ ಹಾಗೂ ಬಾಳೆದಿಂಡಿನಲ್ಲಿ ಸುಂದರವಾದ ವೇದಿಕೆ ಅಥವಾ ದೀಪಕಂಬ ರಚಿಸಿಸುವುದು ಅಲ್ಲಿನ ಸಂಪ್ರದಾಯವೂ ಆಗಿದೆ. ಆ ಕಲೆಯ ಕುರಿತಾಗಿ ಪತ್ರಿಕೆಯೊಂದರಲ್ಲಿ ಬಂದಿದ್ದ ವಿಶೇಷ ವರದಿ ಗಮನಿಸಿದ್ದ ಕೆಸವೆ ಮನೆತನದ ಹೆಣ್ಣು ಮಕ್ಕಳಿಬ್ಬರು ಅದನ್ನು ತಯಾರಿಸಿದ್ದರು. ಬಳಿಕ ಅದರಿಂದ ಸ್ಫೂರ್ತಿ ಪಡೆದು, 11 ಸದಸ್ಯರನ್ನೊಳಗೊಂಡ 'ಕಲಾತ್ಮಿಕ' ಎಂಬ ತಂಡ ಕಟ್ಟಿಕೊಂಡರು. ಬಳಿಕ ಎಲ್ಲರೂ ಆಸಕ್ತಿಯಿಂದ ವಿವಿಧ ಡಿಸೈನ್​ ಕರಗತ ಮಾಡಿಕೊಂಡರು. ಅನೇಕ ಪ್ರಕಾರದ ದೀಪಕಂಬ ಸಿದ್ಧಪಡಿಸತೊಡಗಿದರು. ಬಳಿಕ ಈ ಕಲೆಯನ್ನು ವಿಸ್ತರಿಸಿ ಬೃಹತ್​ ವೇದಿಕೆ ಸಿದ್ಧಪಡಿಸುವಷ್ಟು ಈ ಮಹಿಳಾಮಣಿಗಳು ಸಿದ್ಧಹಸ್ತರಾಗಿದ್ದಾರೆ.
"

ನೋಡಲು ಚೆನ್ನಾಗಿ ಕಾಣುವ ಈ ಕಲೆಯ ಕೆಲಸದಲ್ಲಿ ತುಂಬ ತಾಳ್ಮೆ, ಸಮಯ, ಶ್ರಮ, ಹಣ ಎಲ್ಲವೂ ಬೇಕು. ವೇದಿಕೆ ನಿರ್ಮಾಣದಂತಹ ಕೆಲಸ ಒಂದಿಬ್ಬರು ಮಾಡಲು ಸಾಧ್ಯವಿಲ್ಲ. ಅದಕ್ಕೆ ತಂಡ ರಚಿಸಿಕೊಂಡಿದ್ದೇವೆ. ಆರಂಭದಲ್ಲಿ ಹವ್ಯಾಸವಾಗಿ, ಉಚಿತವಾಗಿ ಮಾಡಿಕೊಡುತ್ತಿದ್ದೆವು. ಈಗ ವ್ಯಾವಹಾರಿಕ ದೃಷ್ಟಿಯಿಂದಲೂ ಮಾಡುತ್ತಿದ್ದೇವೆ. ಎಲ್ಲಿಗೆ ಬೇಕಾದರೂ ಹೋಗಿ ಆಕರ್ಷಕ ವೇದಿಕೆ ನಿರ್ಮಿಸಿಕೊಡುತ್ತಿದ್ದೇವೆ. ನಾವೆಲ್ಲ ಒಂದೇ ಮನೆತನದವರು. 200ಕ್ಕೂ ಹೆಚ್ಚು ಸದಸ್ಯರಿದ್ದೇವೆ. ಬೇರೆ ಬೇರೆ ವಾಸ್ತವ್ಯ ಮಾಡಿಕೊಂಡಿದ್ದರೂ ನಾವೆಲ್ಲರೂ ಏನಾದರೂ ಒಟ್ಟಿಗೆ ಸಾಧನೆ ಮಾಡಬೇಕೆಂದು 'ಕಲಾತ್ಮಿಕ' ತಂಡ ಕಟ್ಟಿಕೊಂಡು ಈ ಕಾರ್ಯ ಮಾಡುತ್ತಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net