ಬಂಟ್ವಾಳದಲ್ಲಿ ಯುವತಿಯ ಬರ್ಬರ ಹತ್ಯೆ

ಮೃತ ಲಾವಣ್ಯ ಗೌಡ ಮತ್ತು ಆರೋಪಿ ಚೇತನ್ ಗೌಡ
ಮೃತ ಲಾವಣ್ಯ ಗೌಡ ಮತ್ತು ಆರೋಪಿ ಚೇತನ್ ಗೌಡ
Published on
ಬಂಟ್ವಾಳ: ಕೆಲಸ ಬಿಟ್ಟು ಮನೆಗೆ ತೆರಳಲು ಬಸ್ಸಿನಲ್ಲಿ ಕುಳಿತಿದ್ದ ಯುವತಿಯನ್ನು ದುಷ್ಕರ್ಮಿಯೋರ್ವ ಬಸ್ಸಿನಿಂದ ಅಟ್ಟಾಡಿಸಿ ತಲವಾರಿನಿಂದ ಮಾರಣಾಂತಿಕವಾಗಿ ಕೊಚ್ಚಿ ಹತ್ಯೆಗೈದ ಘಟನೆ ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದಿದೆ.
ಕೊಲೆ ನಡೆದ ಸ್ಥದಲ್ಲಿ ಬ್ಯಾಗ್, ಮೊಬೈಲ್ ತಲವಾರು ಪತ್ತೆಯಾಗಿರುವುದು.

 ಬಂಟ್ವಾಳ ತಾಲೂಕಿನ ಕಡೇಶಿವಾಲಯ ಕೊಡಂಗೆ ನಿವಾಸಿ ಬಾಳಪ್ಪ ಗೌಡ ಎಂಬುವರ ಮಗಳು ಲಾವಣ್ಯ ಗೌಡ (22) ತಲವಾರು ದಾಳಿಯಿಂದ ಹತ್ಯೆಗೀಡಾದ ಯುವತಿಯಾಗಿದ್ದು, ಹತ್ಯೆಗೈದ ಆರೋಪಿ ಆಕೆಯ ದೂರದ ಸಂಬಂಧಿ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ನಿವಾಸಿ ಚೇತನ್ ಗೌಡ ಎಂದು ಗುರುತಿಸಲಾಗಿದೆ. ಆತ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದು ಪ್ರೇಮ ವೈಫಲ್ಯ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
 ಘಟನೆಯ ಬಳಿಕ ಆರೋಪಿ ತಾನು ಬಂದಿರುವ ಕಾರಿನಲ್ಲಿ ಪರಾರಿಯಾಗಿದ್ದು ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿ ಯುವತಿಯನ್ನು ಕೊಚ್ಚಿ ಕೊಲೆಗೈಯ್ಯುವ ದೃಶ್ಯವನ್ನು ಬಸ್ಸು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಘಟನಾ ಸ್ಥಳದಲ್ಲಿ ರಕ್ತದ ಕೋಡಿ ಹರಿದ್ದಿದ್ದು ಯುವತಿಯ ಬ್ಯಾಗ್, ಮೊಬೈಲ್ ಹಾಗೂ ತಲವಾರು ಪತ್ತೆಯಾಗಿದೆ.
 ಎಸ್ಪಿ ಡಾ.ಅರುಣ್ ಕೆ. ಭೇಟಿ

 ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಎಸ್ಪಿ ಯಶ್ ಕುಮಾರ್ ಶರ್ಮ, ನಗರ ಠಾಣಾ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಎಸ್‌ಐ ಸಂದೀಪ್ ಶೆಟ್ಟಿ, ಟ್ರಾಫಿಕ್ ಎಸ್‌ಐ ಆದರ್ಶ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

 ಯಮನಾದ ಭಗ್ನ ಪ್ರೇಮಿ!

ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂನಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಲಾವಣ್ಯ ಗೌಡ ಬಿ.ಸಿ.ರೋಡಿಗೆ ಬಂದು ಅಲ್ಲಿನ ಕೆ ಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಕಕ್ಕೆಪದವಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕುಳಿತಿದ್ದ ವೇಳೆ ಸಂಜೆ ಸುಮಾರು 5.40ರ ವೇಳೆಗೆ  ಬ್ಯಾಗ್ ಧರಿಸಿಕೊಂಡು ಬಂದ ಆರೋಪಿ ಆಕೆಯ ಪಕ್ಕ ಕುಳಿತಿದ್ದ ಎನ್ನಲಾಗಿದೆ. ಈ ಸಂದರ್ಭ ಆತಂಕಗೊಂಡ ಯುವತಿ ತನ್ನ ಸಂಬಂಧಿಗೆ ಪೋನ್ ಕರೆ ಮಾಡಿ ತಿಳಿಸಿದ್ದು ಬಳಿಕ ಬಸ್ಸಿನಿಂದ ಇಳಿದು ಓಡಲು ಯತ್ನಿಸಿದಾಗ ಆರೋಪಿ ಬ್ಯಾಗಿನಿಂದ ತಲವಾರು ತೆಗೆದು ಆಕೆಯನ್ನು ಬಸ್ಸು ನಿಲ್ದಾಣದ ಮಧ್ಯಭಾಗದವರೆಗೆ ಅಟ್ಟಾಡಿಸಿಕೊಂಡು ಹೋಗಿ ಯದ್ವಾತದ್ವ ಕೊಚ್ಚಿದ್ದಾನೆ. ಬಳಿಕ ತಲವಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿ ಕಾರಿನಲ್ಲಿ ಪರಾರಿಯಾಗಿದ್ದಾನೆ. ಈ ಸಂದರ್ಭ ಕಕ್ಕೆಪದವು ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಎಂಟ್ರಿ ಹಾಕಿಸಿ ಊಟ ತರಲೆಂದು ಬಸ್ಸಿನಿಂದ ಹೊರ ಹೋಗಿದ್ದರು. ಬಸ್ಸಿನಲ್ಲಿ ಕೆಲ ವಿದ್ಯಾರ್ಥಿಗಳು ಮಾತ್ರ ಇದ್ದರು ಎನ್ನಲಾಗಿದೆ. ಆತ ಯುವತಿಯನ್ನು ಹತ್ಯೆಗೈಯ್ಯುವ ದೃಶ್ಯವನ್ನು ಬಸ್ಸು ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ಚಿತ್ರೀಕರಿಸಿದ್ದಾರೆ.

ವಿಶೇಷ ತಂಡ ರಚನೆ 

 ಆರೋಪಿಯ ಪತ್ತೆಗೆ ವಿಶೇಷ  ಪೊಲೀಸ್ ತಂಡ ರಚಿಸಿರುವುದಾಗಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಅವರು ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿ, ಹತ್ಯೆ ನಡೆಸಿದ ಆರೋಪಿ ಯುವತಿಯ ದೂರದ ಸಂಬಂಧಿಯಾಗಿದ್ದು ಏಕಮುಖ ಪ್ರೇಮ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಗಾಯಗೊಂಡ ಯುವತಿಯನ್ನು ಆಂಬುಲೆನ್ಸ್ ಮೂಲಕ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿಸಿದರು.

 ಬಸ್ಸು ನಿಲ್ದಾಣದ ಪಕ್ಕ ಕಾಯುತ್ತಿದ್ದ

 ಆರೋಪಿ ಚೇತನ್ ಗೌಡ ಯುವತಿಯನ್ನು ಹತ್ಯೆ ಮಾಡಲೆಂದೇ ಸಂಚು ರೂಪಿಸಿ ತನ್ನ ಬ್ಯಾಗಿನಲ್ಲಿ ತಲವಾರು ತಂದಿದ್ದ. ಕಕ್ಕೆಪದವು ಬಸ್ಸು ನಿಲ್ದಾಣಕ್ಕೆ ಬರುವರೆಗೆ ಬಸ್ಸು ನಿಲ್ದಾಣದಲ್ಲಿ ತನ್ನ ಕಾರಿನಲ್ಲಿ ಕಾಯುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

 ಆತಂಕದ ವಾತಾವರಣ 

 ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ಬಿ.ಸಿ.ರೋಡಿನಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಅನೇಕರು ಬಸ್ಸು ನಿಲ್ದಾಣದ ಬಳಿ ದೌಡಾಯಿಸಲು ಆರಂಭಿಸಿದ್ದು ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೂ ಕೆಲ ಹೊತ್ತು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಬಿ.ಸಿ.ರೋಡಿನಲ್ಲಿ ಖಾಸಗಿ ಬಸ್ಸು ನಿಲ್ದಾಣ ಪ್ರತ್ಯೇಕವಾಗಿದ್ದು ಇಲ್ಲಿ ಅಂತಹ ಯಾವುದೇ ಘಟನೆಗಳು ಕಂಡು ಬಾರದ ಹಿನ್ನೆಲೆಯಲ್ಲಿ ಇದೊಂದು ವದಂತಿ ಎನ್ನುವ ಸುದ್ದಿಯೂ ಕೇಳಿ ಬಂದಿತ್ತು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹತ್ಯೆಯ ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ಜನರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದತ್ತ ದೌಡಾಯಿಸಿದರು. 

 ಬಡ ಕುಟುಂಬ 

 ದುಷ್ಕರ್ಮಿಯಿಂದ ಹತ್ಯೆಗೀಡಾದ ಯವತಿಯು ಬಡ ಕುಟುಂಬಕ್ಕೆ ಸೇರಿದವಳು. ತಂದೆ ಬಾಳಪ್ಪ ಗೌಡ ಕೃಷಿಕ, ತಾಯಿ ಗೃಹಿಣಿ. ಮೂರು ಮಂದಿ ಹೆಣ್ಣು ಮಕ್ಕಳ ಪೈಕಿ ಲಾವಣ್ಯ ಕೊನೆಯವಳು. ಮೊದಲ ಮಗಳಿಗೆ ವಿವಾಹವಾಗಿದ್ದು, ಎರಡನೆಯವಳು ಉದ್ಯೋಗಿಯಾಗಿದ್ದಾಳೆ. 

 ನಿರ್ಜನ ಬಸ್ಸು ನಿಲ್ದಾಣ 

 ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದಂತೆ. ಇಲ್ಲಿ ಜನರು ಬಸ್ಸಿಗೆ ಕಾಯುವುದು ಕಡಿಮೆ.  ಬಸ್ಸು ಕೇವಲ ಎಂಟ್ರಿ ಹಾಕಿಸಿಕೊಳ್ಳಲು ಮಾತ್ರ ಹೋಗುತ್ತವೆ. ಇದರಿಂದಾಗಿ ಈ ಬಸ್ಸು ನಿಲ್ದಾಣದಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಪ್ರಯಾಣಿಕರಿರಿರುತ್ತಾರೆ. ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿ ತನ್ನ ಕೃತ್ಯ ಎಸಗಿ ಸುಲಭದಲ್ಲಿ ಪರಾರಿಯಾಗಿದ್ದಾನೆ. 

 ಶಾಸಕರಿಂದ ಕಠಿಣ ಕ್ರಮಕ್ಕೆ ಸೂಚನೆ

 ಒಡಿಶಾದ ಪುರಿ ಜಗನ್ನಾಥ ದೇವರ ರಥೋತ್ಸವದಲ್ಲಿ ಭಾಗಿಯಾಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಅವರು, ಬಂಟ್ವಾಳದಲ್ಲಿ ನಡೆದ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರಕರಣದ ಆರೋಪಿಯನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳಲು ಸೂಚನೆ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿ ಆರೋಪಿಯ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ. 
 *ಬಿಟಿಡಬ್ಲ್ಯು_ಜು16_1ಎ, 1ಬಿ, 1ಸಿ, 1ಡಿ
 ಕೊಲೆ ನಡೆದ ಸ್ಥಲದಲ್ಲಿ ಬ್ಯಾಗ್, ಮೊಬೈಲ್ ತಲವಾರು ಪತ್ತೆಯಾಗಿರುವುದು.
 ಎಸ್ಪಿ ಡಾ.ಅರುಣ್ ಕೆ. ಭೇಟಿ
 ಮೃತ ಲಾವಣ್ಯ ಗೌಡ
 ಆರೋಪಿ ಚೇತನ್ ಗೌಡ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net