ಶಿಲಾನ್ಯಾಸಗೊಂಡು ಏಳು ವರ್ಷಗಳಾದರೂ ತಲೆಎತ್ತದ ಯೋಗ ಕೇಂದ್ರ

 ಕರಿಂದಳದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಶಂಕುಸ್ಥಾಪನೆಗೊಂಡ ಜಾಗ ಪಾಳುಬಿದ್ದಿರುವುದು.
ಕರಿಂದಳದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಶಂಕುಸ್ಥಾಪನೆಗೊಂಡ ಜಾಗ ಪಾಳುಬಿದ್ದಿರುವುದು.
Published on
ಮುಳ್ಳೇರಿಯ: ಜಿಲ್ಲೆಯ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಭರವಸೆ ನೀಡಲಿದ್ದ ಕೇಂದ್ರ ಸರ್ಕಾರದ ಯೋಜನೆಯಾದ ಕರಿಂದಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ ಶಿಲಾನ್ಯಾಸಗೊಂಡು ಏಳು ವರ್ಷಗಳಾದರೂ ಸಾಕಾರಗೊಂಡಿಲ್ಲ.
ಭಾರಿ ಗೌಜಿ ಗದ್ದಲಗಳೊಂದಿಗೆ ಶಂಕುಸ್ಥಾಪನೆಗೊಂಡ ಯೋಜನೆ ಕಡತಗಳಲ್ಲೇ ಬಾಕಿಯಾಗಿದೆ. ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಿಲಾಫಲಕವನ್ನು ಪಂಚಾಯಿತಿ ಕಚೇರಿಯ ಒಂದು ಕೋಣೆಯಲ್ಲಿ ಇಡಲಾಗಿದೆ. ಯೋಗ ಕೇಂದ್ರ ನಿರ್ಮಾಣ ಕಾರ್ಯ ಒಂದಿಂಚೂ ಮುಂದೆ ಸಾಗಿಲ್ಲ. 80 ಕೋಟಿ ರೂ. ಮೌಲ್ಯದ ಅಂದಾಜು ವೆಚ್ಚವನ್ನು ಈ ಯೋಜನೆಗೆ ಅಂದು ನಿಗದಿಪಡಿಸಲಾಗಿತ್ತು.
ಕೇಂದ್ರ ಆಯುಷ್ ಸಚಿವಾಲಯದ ಅಡಿಯಲ್ಲಿ ಸಂಶೋಧನಾ ಕೇಂದ್ರಕ್ಕೆ 2019ರ ಫೆಬ್ರವರಿ 3ರಂದು ಅಡಿಪಾಯ ಹಾಕಲಾಗಿತ್ತು. ಅಂದಿನ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್, ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ಕಂದಾಯ ಸಚಿವ ಇ.ಚಂದ್ರಶೇಖರನ್ ಭಾಗವಹಿಸಿದ್ದ ಸಮಾರಂಭದಲ್ಲಿ ಶೀಘ್ರವೇ ಕಾಮಗಾರಿ ಪೂರ್ಣವಾಗುವ ಭರವಸೆ ನೀಡಲಾಗಿತ್ತು.
15 ಎಕರೆ ಜಾಗ ಮಂಜೂರು: ರಾಜ್ಯ ಸರ್ಕಾರ ಕಿನನೂರು-ಕರಿಂತಲಂ ಪಂಚಾಯಿತಿಯ ಕರಿಂತಲಂ ಗ್ರಾಮದಲ್ಲಿ ಸರ್ವೇ ನಂಬರ್ 89/1ಗೆ ಸೇರಿದ ಥೋಲೇನಿ ಪ್ರದೇಶದಲ್ಲಿ 15 ಎಕರೆ ಭೂಮಿಯನ್ನು ಈ ಯೋಜನೆಗಾಗಿ ಮಂಜೂರಾಗಿತ್ತು. ಈ ಭೂಮಿಯನ್ನು 100 ರೂ.ಗಳ ಗುತ್ತಿಗೆ ದರದಲ್ಲಿ 30 ವರ್ಷಗಳ ಕಾಲಕ್ಕೆ ಮಂಜೂರು ಮಾಡಲಾಗಿತ್ತು. 100 ಹಾಸಿಗೆ ಹೊಂದಿರುವ ಆಧುನಿಕ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ ಎಲ್ಲ ಭರವಸೆಗಳು ಘೋಷಣೆಗಳಿಗಷ್ಟೇ ಸೀಮಿತವಾಗಿದ್ದು ಏಳು ವರ್ಷ ಕಳೆದರೂ ಯೋಜನೆ ಮಾತ್ರ ಕೈಗೂಡಿಲ್ಲ.

ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಗುರಿ

ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ಗುರಿಯೊಂದಿಗೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿತ್ತು. ಖಾಸಗಿ ವಲಯದಲ್ಲಿ ನಿಯಮಿತ ಯೋಗ-ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಪ್ರತಿ ವ್ಯಕ್ತಿಗೆ ದಿನಕ್ಕೆ 2,000 ರೂ.ಗಳಿಗಿಂತ ಹೆಚ್ಚು ವೆಚ್ಚವಾಗುತ್ತದೆ. ಆದರೆ ಈ ಯೋಜನೆಯಡಿ 500 ರೂ. ದರದಲ್ಲಿ ಚಿಕಿತ್ಸೆ ನೀಡಲು ಯೋಜಿಸಲಾಗಿತ್ತು. ಅಲ್ಲದೆ ಆದ್ಯತಾ ಗುಂಪುಗಳಿಗೆ ಸೇರಿದವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿಯೂ ಭರವಸೆ ನೀಡಲಾಗಿತ್ತು.

ಕೇಂದ್ರ ಸರ್ಕಾರದಿಂದ ಕ್ರಮವಿಲ್ಲ

ಎನ್‌ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಘೋಷಿಸಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಎರಡನೇ ಬಾರಿ ಮತ್ತೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೂ ಯೋಜನೆಗೆ ಜೀವ ನೀಡಲಾಗಿಲ್ಲ. ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರೂ, ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಯೋಜನೆಯ ಅನಿಶ್ಚಿತತೆ ಸ್ಥಳೀಯ ನಿವಾಸಿಗಳು ಮತ್ತು ಆರೋಗ್ಯ ವಲಯದಲ್ಲಿ ನಿರಾಸೆ ಮೂಡಿಸಿದೆ. ಕರಿಂದಳವನ್ನು ರಾಷ್ಟ್ರೀಯ ಮಟ್ಟದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಬಹುದಾಗಿದ್ದ ಯೋಜನೆಯೊಂದು ಹಳ್ಳಹಿಡಿದಿರುವುದು ದುರದೃಷ್ಟಕರ. ಘೋಷಿಸಲಾದ ಯೋಜನೆಯನ್ನು ಅನುಷ್ಠಾನಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಚ್ಛಾಶಕ್ತಿ ತೋರಬೇಕು.

— ಪರಕೋಲ್ ರಾಜನ್, ಪರಪ್ಪ ಬ್ಲಾಕ್ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net