ನಾಗರಪಂಚಮಿಯಂದು ಶಾಲೆಗಳಿಗೆ ಘೋಷಿಸಿ ರಜಾ

ನಾಗರಪಂಚಮಿಯಂದು ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸುವಂತೆ ಡಿಸಿ ಸ್ವರೂಪಾ ಟಿ.ಕೆ. ಅವರಿಗೆ ಯಶ್​ಪಾಲ್​ ಸುವರ್ಣ ಮನವಿ ಮಾಡಿದರು.
ನಾಗರಪಂಚಮಿಯಂದು ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸುವಂತೆ ಡಿಸಿ ಸ್ವರೂಪಾ ಟಿ.ಕೆ. ಅವರಿಗೆ ಯಶ್​ಪಾಲ್​ ಸುವರ್ಣ ಮನವಿ ಮಾಡಿದರು.
Published on

* ಜಿಲ್ಲಾಧಿಕಾರಿಗೆ ಶಾಸಕ ಯಶ್​ಪಾಲ್​ ಸುವರ್ಣ ಮನವಿ

ಉಡುಪಿ: ರಾಜ್ಯಾದ್ಯಂತ ಜನರು 'ನಾಗರ ಪಂಚಮಿ ಹಬ್ಬ'ವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ಹೀಗಾಗಿ ಈ ಬಾರಿಯ ನಾಗರಪಂಚಮಿಗೆ ಆ.17ರಂದು ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸ್ಥಳೀಯ ರಜೆ ಘೋಷಿಸಬೇಕು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿಯನ್ನು ಭೇಟಿಯಾಗಿ ಮಾತನಾಡಿ, ಬದುಕಿನ ಅನಿವಾರ್ಯತೆಗಾಗಿ ಉದ್ಯೋಗ ನಿಮಿತ್ತ ಎಲ್ಲೆಲ್ಲೋ ಇರುವ ಸಂಬಂಧಿಕರನ್ನು ಈ ಹಬ್ಬವು ಬೆಸೆಯುವಂತೆ ಮಾಡುತ್ತದೆ. ಕುಟುಂಬದ ಹೆಚ್ಚಿನ ಸದಸ್ಯರು ಮಾತೃ ಕುಟುಂಬ ಹಾಗೂ ಪಿತೃ ಕುಟುಂಬದ ಮೂಲ ನಾಗಬನಕ್ಕೆ ಹೋಗಿ ತನು ಅರ್ಪಿಸಿ ಬರುವ ಧಾರ್ಮಿಕ ನಂಬಿಕೆ ಹಾಗೂ ಸಂಪ್ರದಾಯ ಇಲ್ಲಿದೆ ಎಂದು ಮಾಹಿತಿ ನೀಡಿದರು.
ಕರಾವಳಿಯ ಜಿಲ್ಲೆಗಳಲ್ಲಿ ಪ್ರತಿ ಕುಟುಂಬಕ್ಕೂ ಒಂದು ಮೂಲ ಸ್ಥಾನ ನಾಗಬನ ಇದೆ. ನಾಗರಕಲ್ಲುಗಳು ಇರುವ ತಾಣಕ್ಕೆ ಹಿರಿಯರು, ಮಕ್ಕಳೂ ಸೇರಿ ಕುಟುಂಬ ಸಮೇತರಾಗಿ ತೆರಳಿ ನಾಗ ದೇವರಿಗೆ ಹಾಲೆರೆದು ಪೂಜಿಸುವ ಪದ್ಧತಿ ಇಲ್ಲಿದೆ. ಇಂತಹ ಸಂಸ್ಕೃತಿ ಹೊಂದಿರುವ ನಮ್ಮ ತುಳುನಾಡಿಗೆ ಪುರಾಣಗಳಲ್ಲಿ 'ನಾಗರಖಂಡ' ಎಂದೂ ಉಲ್ಲೇಖವಿದೆ ಎಂದು ತಿಳಿಸಿದರು.
ದೈವಿಕ ಶಕ್ತಿ, ಧಾರ್ಮಿಕ ಆಚರಣೆಯ ತಳಹದಿಯಲ್ಲಿ ನಿಂತಿರುವ ತುಳುನಾಡಿನಲ್ಲಿ ನಾಗಾರಾಧನೆ ಹೆಚ್ಚು ವಿಶೇಷತೆ ಹೊಂದಿದೆ. ಇದನ್ನು ಯುವ ಪೀಳಿಗೆಯ ವಿದ್ಯಾರ್ಥಿಗಳಿಗೂ ಪರಿಚಯಿಸಿ ಮುಂದುವರಿಸಿಕೊಂಡು ಹೋಗಬೇಕಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಮನವಿಯ ಮೇರೆಗೆ ಆ.17ರಂದು ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಿಗೆ ಸ್ಥಳೀಯ ರಜೆ ಘೋಷಿಸಿ ಕ್ರಮ ವಹಿಸಬೇಕು ಎಂದು ಯಶ್​ಪಾಲ್​ ಸುವರ್ಣ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net