ಯಕ್ಷಗಾನ ಡಿಜಿಟಲ್ ಲೋಕಕ್ಕೆ ಹೊಸ ಹೆಜ್ಜೆc

ಯಕ್ಷಗಾನದ ಸಾಂಧರ್ಭಿಕ ಚಿತ್ರ
ಯಕ್ಷಗಾನದ ಸಾಂಧರ್ಭಿಕ ಚಿತ್ರ
Published on
ವಿಜಯವಾಣಿ ಸುದ್ದಿಜಾಲ ಬೈಂದೂರು
ಯಕ್ಷಗಾನಕ್ಕಾಗಿ ವಿಶೇಷವಾಗಿ ರೂಪುಗೊಂಡಿರುವ ತಿತ್ತಿತೈ ಯಕ್ಷಗಾನ ಆ್ಯಪ್ ಇದೀಗ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿದೆ. ಒಬ್ಬ ಯಕ್ಷಗಾನ ಅಭಿಮಾನಿ, ಕಲಾಪೋಷಕ, ಕಲಾವಿದ ಹಾಗೂ ಸಂಘಟಕನ ದೃಷ್ಟಿಕೋನದಿಂದ ಯೋಚಿಸಿ ನಿರ್ಮಿಸಲಾದ ಈ ವೇದಿಕೆ, ಯಕ್ಷಗಾನದ ವಿವಿಧ ಆಯಾಮಗಳನ್ನು ಒಂದೇ ಸೂರಿನಡಿ ತರುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ.
ಮೊದಲ ಬಾರಿಗೆ ಯಕ್ಷಗಾನ ಕಲಾವಿದರು, ಮೇಳಗಳು, ಪ್ರಸಂಗಗಳು, ಯಕ್ಷಗಾನಕ್ಕೆ ಸಂಬಂಧಿಸಿದ ಸ್ಟೋರ್, ಇವೆಂಟ್ಸ್(ಆಟಗಳು), ಟಿಕೆಟ್ ಬುಕಿಂಗ್ ವ್ಯವಸ್ಥೆ ಹಾಗೂ ಸಂಕಷ್ಟದಲ್ಲಿರುವ ಕಲಾವಿದರಿಗೆ ದೇಣಿಗೆ ನೀಡುವ ವೇದಿಕೆ, ಯಕ್ಷಗಾನ ಕ್ಲಾಸ್, ವೇಷಭೂಷಣಗಳು ಸೇರಿದಂತೆ ಹಲವು ಸೇವೆಗಳನ್ನು ಒಂದೇ ಅಪ್ಲಿಕೇಶನ್‌ನಲ್ಲಿ ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪುಗೊಂಡಿದೆ. ಈ ಡಿಜಿಟಲ್ ವೇದಿಕೆಯ ಹಿಂದಿರುವ ಕನಸುಗಾರ ಕಮಲಶಿಲೆ ಮೇಳದ ಸಂಸ್ಥಾಪಕರಲ್ಲಿ ಒಬ್ಬರಾದ ಕೀರ್ತಿಶೇಷ ಕುಡೇರಿ ಕೃಷ್ಣ ಕನ್ನಂತರ ಪುತ್ರ ಕುಡೇರಿ ಸಂಪತ್ ಕನ್ನಂತ್.
ಯಕ್ಷಗಾನದ ಮೇಲಿನ ಅಪಾರ ಆಸಕ್ತಿ, ಯಕ್ಷಗಾನ ಪ್ರದರ್ಶನಗಳ ಸಂಘಟನೆ ಹಾಗೂ ಸ್ವತಃ ಹವ್ಯಾಸಿ ಕಲಾವಿದರೂ ಆಗಿದ್ದು, ಕಲೆಯ ಬೆಳವಣಿಗೆಗೆ ತಮ್ಮದೆ ಆದ ಕೊಡುಗೆ ನೀಡುತ್ತಾ ಬಂದಿದ್ದು, ಯಕ್ಷಗಾನ ಸಮುದಾಯದ ಅಗತ್ಯಗಳನ್ನು ಮನಗಂಡು ಈ ವೇದಿಕೆ ಸೃಷ್ಟಿಸಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಒಂದೇ ಸ್ಥಳದಲ್ಲಿ ಪಡೆಯುವುದು ಸುಲಭದ ವಿಷಯವಲ್ಲ.
ಯಕ್ಷಗಾನದ ಕುರಿತಾಗಿ ಪ್ರತ್ಯೇಕ ಹಾಗೂ ಸಮಗ್ರ ಮಾಹಿತಿ ಒದಗಿಸುವ ತಾಣಗಳು ಕಡಿಮೆ ಇವೆ. ಈ ಕೊರತೆ ನೀಗಿಸುವ ಉದ್ದೇಶದಿಂದ ತಿತ್ತಿತೈ ಯಕ್ಷಗಾನ ಆ್ಯಪ್ ಸಿದ್ದಗೊಂಡಿದ್ದು, ಕಲಾವಿದರು, ಕಲಾಭಿಮಾನಿಗಳು, ಸಂಘಟಕರು ಮತ್ತು ಪ್ರೇಕ್ಷಕರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಕಾರ್ಯಕ್ಕೆ ಮುಂದಾಗಿದೆ.

ಸದ್ಯಕ್ಕೆ ಲಭ್ಯವಿರುವ ವೈಶಿಷ್ಟ್ಯಗಳ ಜತೆಗೆ, ಮುಂದಿನ ದಿನಗಳಲ್ಲಿ ಇನ್ನೂ ಹಲವು ಆಕರ್ಷಕ ಹಾಗೂ ಉಪಯುಕ್ತ ಸೌಲಭ್ಯ ಪರಿಚಯಿಸುವ ಯೋಜನೆ ಇದೆ. ಯಕ್ಷಗಾನ ಲೋಕಕ್ಕೆ ತಂತ್ರಜ್ಞಾನದ ನೆರವಿನಿಂದ ಹೊಸ ಆಯಾಮ ನೀಡುವ ಈ ಪ್ರಯತ್ನಕ್ಕೆ ಯಕ್ಷಗಾನ ಪ್ರೇಮಿಗಳ ಬೆಂಬಲ ಅಗತ್ಯ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಮೇಳದ ತಿರುಗಾಟ, ಆಟಗಳ ವೇಳಾಪಟ್ಟಿ, ಆಟ ನಡೆಯುವ ಸ್ಥಳದ ಮಾಹಿತಿ, ಕಲಾವಿದರ ವಿವರಗಳು ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ ಪರಿಕರಗಳ ಮಾಹಿತಿ ನಿಯಮಿತವಾಗಿ ಈ ವೇದಿಕೆಯಲ್ಲಿ ಲಭ್ಯವಾಗುವಂತಾಗಬೇಕು. ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಒಂದೇ ಸ್ಥಳದಲ್ಲಿ ಸಿಗುವ ಸಮಗ್ರ ಡಿಜಿಟಲ್ ಕೇಂದ್ರವಾಗಿ ಇದು ಬೆಳೆಯಲಿ ಎಂಬುದು ನಮ್ಮ ಆಶಯ.

— ಕುಡೇರಿ ಸಂಪತ್ ಕನ್ನಂತ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net