ಯಕ್ಷಗಾನದಿಂದ ಜೀವನದ ಜ್ಞಾನ ಲಭ್ಯ

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ್ದ ಚಿಟ್ಟಾಣಿ ಯಕ್ಷಗಾನ ಸಪ್ತಾಹವನ್ನು ವೇದವರ್ಧನ ಶ್ರೀ ಉದ್ಘಾಟಿಸಿದರು. ಎಂ.ಗೋಪಿಕೃಷ್ಣ ರಾವ್​, ಗಂಗಾಧರ ರಾವ್​ ಉಪಸ್ಥಿತರಿದ್ದರು.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ್ದ ಚಿಟ್ಟಾಣಿ ಯಕ್ಷಗಾನ ಸಪ್ತಾಹವನ್ನು ವೇದವರ್ಧನ ಶ್ರೀ ಉದ್ಘಾಟಿಸಿದರು. ಎಂ.ಗೋಪಿಕೃಷ್ಣ ರಾವ್​, ಗಂಗಾಧರ ರಾವ್​ ಉಪಸ್ಥಿತರಿದ್ದರು.
Published on: 

* ಪರ್ಯಾಯ ಶೀರೂರು ವೇದವರ್ಧನ ಶ್ರೀ ಆಶೀರ್ವಚನ

* ಉಡುಪಿ ರಾಜಾಂಗಣದಲ್ಲಿ ಚಿಟ್ಟಾಣಿ ಸಪ್ತಾಹ ಉದ್ಘಾಟನೆ

ಉಡುಪಿ: ಪೌರಾಣಿಕ ಯಕ್ಷಗಾನ ವೀಕ್ಷಣೆಯಿಂದ ಪರಮಾತ್ಮನ ಸಹಾನುಭೂತಿ ಲಭಿಸಿ, ಆತನ ಸಂಪೂರ್ಣ ಅನುಗ್ರಹ ಪ್ರಾಪ್ತವಾಗುತ್ತದೆ. ಇದರಿಂದ ಜೀವನ ನಿರ್ವಹಣೆಯ ಜ್ಞಾನ ಲಭಿಸುತ್ತದೆ. ಮನರಂಜನೆಗಾಗಿ ಅಥವಾ ಸಮಯ ಕಳೆಯಲು ಯಕ್ಷಗಾನ ವೀಕ್ಷಿಸಬಾರದು. ಪ್ರಸಂಗಗಳು ನೀಡುವ ಮೌಲ್ಯಯುತ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ವತಿಯಿಂದ ಮಂಗಳವಾರ (ಅ.27) ಆಯೋಜಿಸಿದ್ದ 19ನೇ ವರ್ಷದ ಚಿಟ್ಟಾಣಿ ಸಪ್ತಾಹ ಉದ್ಘಾಟಿಸಿ ಆಶೀರ್ವಚನ ನೀಡಿದರು.

ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ.
ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ.

ಚಿಟ್ಟಾಣಿ ಅಭಿಮಾನಿ ಬಳಗದ ಕಾರ್ಯದರ್ಶಿ ಎಂ.ಗೋಪಿಕೃಷ್ಣ ರಾವ್​, ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್​, ಕಾರ್ಯದರ್ಶಿ ಮುರಳಿ ಕಡೆಕಾರ್​ ಉಪಸ್ಥಿತರಿದ್ದರು. ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

'ಶ್ರೀರಾಮ ನಿರ್ಯಾಣ' ಪ್ರಸಂಗ

ಸಭಾ ಕಾರ್ಯಕ್ರಮದ ಬಳಿಕ ಉಡುಪಿ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ ಶ್ರೀರಾಮ ನಿರ್ಯಾಣ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.

ಹಿಮ್ಮೇಳದಲ್ಲಿ ವಿದ್ವಾನ್​ ಗಣಪತಿ ಭಟ್​, ಕವ್ವಾಳೆ ಗಣಪತಿ ಭಾಗವತ, ವಿಘ್ನೇಶ್ವರ ಕರಸರಕೊಪ್ಪ, ಮುಮ್ಮೇಳದಲ್ಲಿ ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ಅಶೋಕ ಭಟ್​ ಸಿದ್ಧಾಪುರ, ವಿನಯ ಬೇರೊಳ್ಳಿ, ಸುಧೀರ ಉಪ್ಪೂರು, ನಾಗೇಂದ್ರ ಮೂರೂರು, ನಾಗೇಶ ಕುಳಿಮನೆ ಪಾಲ್ಗೊಂಡಿದ್ದರು.

ಅ.28ರಂದು ಪ್ರಲ್ಹಾದ ಚರಿತ್ರೆ, ಅ.29ರಂದು ದಕ್ಷ ಯಜ್ಞ, ಅ.30ರಂದು ಬ್ರಹ್ಮ ಕಪಾಲ, ಅ.31ರಂದು ಲಂಕಾ ದಹನ, ನ.1ರಂದು ಸತ್ಯವಾನ ಸಾವಿತ್ರಿ, ನ.2ರಂದು ರಾಜಾ ಬೃಹದ್ರತ ಪ್ರದರ್ಶನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net