ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ

kalaranga
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡಕ್ಕೆ 1 ಲಕ್ಷ ಮೊತ್ತದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ ಪ್ರದಾನ ಮಾಡಿದರು.
Published on: 

ಉಡುಪಿ: ವೃತ್ತಿಗಾಗಿ ಬದುಕನ್ನು ಮೀಸಲಿಟ್ಟು ಸಾಧನೆ ಮಾಡಿದ ಯಕ್ಷಗಾನ ಕಲಾವಿದರು ತಪಸ್ವಿಗಳಾಗಿದ್ದಾರೆ. ವೃತ್ತಿಗೆ ಪ್ರವೇಶ ಪಡೆದ ಮೇಲೆ ಈ ಕ್ಷೇತ್ರಕ್ಕೆ ಗೌರವ ಸಲ್ಲಿಸಿದ್ದಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಹೇಳಿದರು.

ಇನ್ಫೋಸಿಸ್​ ಫೌಂಡೇಶನ್​ ಯಕ್ಷಗಾನ ಡೆವಲಪ್​ಮೆಂಟ್​ ಟ್ರೈನಿಂಗ್​, ರಿಸರ್ಚ್​ ಸೆಂಟರ್​ನಲ್ಲಿ ನಡೆದ ಯಕ್ಷಗಾನ ಕಲಾರಂಗದ 2026ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು.

ಕಲಾರಂಗ ಕಲಾವಿದರಿಗೆ ಆಶ್ರಯವಾಗಿದ್ದು, ಸಮಾಜದ ಅಭಿಮಾನದ ಸಂಪತ್ತು ಗಳಿಸಿದೆ. ಕಲಾರಂಗದ ಬಗ್ಗೆ ಸಮಾಜವೂ ಉತ್ತಮ ಸ್ಪಂದನೆ ನೀಡುತ್ತಿದ್ದು, ಸಂಸ್ಥೆಯ ಜವಾಬ್ದಾರಿಯೂ ಹೆಚ್ಚಾಗುತ್ತಿದೆ ಎಂದು ಶ್ಲಾಘಿಸಿದರು.

ಬೆಂಗಳೂರು ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ. ಟಿ. ಶ್ಯಾಮ್​ ಭಟ್​ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯಶ್​ಪಾಲ್​ ಸುವರ್ಣ ಯಕ್ಷ ವಿದ್ಯಾಪೋಷಕ್​ನ 74 ವಿದ್ಯಾರ್ಥಿಗಳಿಗೆ 8,34.500 ರೂ. ಸಹಾಯಧನವನ್ನು ವಿತರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟರು ಸಾಂತ್ವನ ನಿಧಿಯನ್ನು ವಿತರಿಸಿದರು.

ಉದ್ಯಮಿಗಳಾದ ಹರೀಶ್​ ರಾಯಸ್​, ಲೀಲಾಕ್ಷ ಬಿ. ಕರ್ಕೇರ, ಹೊನ್ನಾವರ ಎಂ.ಪಿ.ಇ ಸೊಸೈಟಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಿ ಕೃಷ್ಣಮೂರ್ತಿ ಭಟ್​, ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಅಧ್ಯಕ್ಷ ಜಯಂತ ಅಮೀನ್​ ಮುಖ್ಯ ಅಭ್ಯಾಗತರಾಗಿದ್ದರು.

ಈ ಸಂದರ್ಭದಲ್ಲಿ 24 ಮಂದಿ ಹಿರಿಯ ಕಲಾವಿದರಿಗೆ ತಲಾ ರೂ. 20,000 ನಗದು ಪುರಸ್ಕಾರ, ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡಕ್ಕೆ 1 ಲಕ್ಷ ಮೊತ್ತದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ ಹಾಗೂ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಕಿಶೋರ್​ ಸಿ. ಉದ್ಯಾವರ ಇವರಿಗೆ ಯಕ್ಷಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಹೆಗಡೆ ಸಾಧಕರನ್ನು ಪರಿಚಯಿಸಿದರು.