

ಉಡುಪಿ: ಯಕ್ಷಗಾನವು ಕರಾವಳಿಯ ಮಣ್ಣಿನ ಕಲೆಯಾಗಿದೆ. ಇದನ್ನು ಕಲಿತ ಮಕ್ಕಳು ಸಂಸತಿ ಸಂಪನ್ನರಾಗಲಿದ್ದು, ಅವರ ಶೈಕ್ಷಣಿಕ ಫಲಿತಾಂಶದಲ್ಲೂ ಏಳಿಗೆ ಕಂಡುಬರುತ್ತಿದೆ. ಪುರುಷ ಪ್ರಧಾನವಾಗಿದ್ದ ಈ ಕಲೆಯಲ್ಲಿ ಮಹಿಳಾ ಪ್ರಾಧಾನ್ಯತೆಯೂ ಕಂಡುಬರುತ್ತಿದೆ. ವಿದ್ಯಾರ್ಥಿಗಳಲ್ಲಿ ಬುದ್ಧಿಮತ್ತೆ ಹೆಚ್ಚಿಸುವ ಯಕ್ಷಗಾನವು ಸನಾತನ ಸಂಸ್ಕೃತಿ ಉಳಿಸಿ, ಬೆಳಗುವ ಕಾರ್ಯ ಮಾಡುತ್ತಿದೆ. ಆ ನಿಟ್ಟಿನಲ್ಲಿ ಯಕ್ಷಶಿಕ್ಷಣ ಟ್ರಸ್ಟ್ನ ಕಾರ್ಯ ಅನನ್ಯ ಎಂದು ಉಡುಪಿ ಶಾಸಕ ಹಾಗೂ ಟ್ರಸ್ಟ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಯಕ್ಷಶಿಕ್ಷಣ ಟ್ರಸ್ಟ್, ಉಡುಪಿ ಶ್ರೀಕೃಷ್ಣ ಮಠ, ಪ್ರದರ್ಶನ ಸಂಘಟನಾ ಸಮಿತಿ ಹಾಗೂ ಉಡುಪಿ, ಕಾಪು, ಕುಂದಾಪುರ, ಬೈಂದೂರು ಶಾಸಕರ ಸಹಕಾರದಲ್ಲಿ ಬ್ರಹ್ಮಾವರದ ಬಂಟರ ಭವನದ ಮುಂಭಾಗದಲ್ಲಿ ನಿರ್ಮಿಸಿದ ಕೃಷ್ಣಸ್ವಾಮಿ ಜೋಯಿಸ ವೇದಿಕೆಯಲ್ಲಿ 99 ಪ್ರೌಢಶಾಲೆಗಳ 'ಕಿಶೋರ ಯಕ್ಷಗಾನ ಸಂಭ್ರಮ' ಉದ್ಘಾಟಿಸಿ ಮಾತನಾಡಿದರು.
ಕೃಷ್ಣಪ್ರಸಾದ ಕ್ಯಾಶ್ಯು ಇಂಡಸ್ಟ್ರೀಸ್ ಪ್ರೈ. ಲಿ. ಬ್ರಹ್ಮಾವರದ ಮಾಲೀಕ ಸಂಪತ್, ವಕೀಲ ಬೈಕಾಡಿ ಸುಪ್ರಸಾದ ಶೆಟ್ಟಿ, ಬಂಟರ ಭವನದ ಸಂಚಾಲಕ ಸಿ. ಭುಜಂಗ ಶೆಟ್ಟಿ ಮಾತನಾಡಿ, ಯಕ್ಷಶಿಕ್ಷಣದ ಮಹತ್ವ ತಿಳಿಸಿದರು. ನಮ್ಮ ಜಿಲ್ಲೆಯ ಪ್ರೌಢಶಾಲಾ ಮಕ್ಕಳಿಗೆ ದೊರೆತ ಮಹಾಭಾಗ್ಯವಾಗಿದ್ದು, ಯಕ್ಷಗಾನ ಕಲಾರಂಗದ ಈ ಕಾರ್ಯವು ಬೆರಗು ಮೂಡಿಸುತ್ತಿದೆ ಎಂದರು.
ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿ. ಕೊಕ್ಕರ್ಣೆಯ ಅಧ್ಯಕ್ಷ ಮೈರ್ವಾಡಿ ಅಶೋಕ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಪಂ ಮಾಜಿ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಲಯನ್ಸ್ ಮಾಜಿ ಗವರ್ನರ್ ಜ್ಞಾನವಸಂತ, ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ ಕುಲಾಲ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಉಪಸ್ಥಿತರಿದ್ದರು.
ಬ್ರಹ್ಮಾವರ ಸಂಘಟನಾ ಸಮಿತಿ ಅಧ್ಯಕ್ಷ ಸುಧೀರ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಮುರಳಿ ಕಡೆಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದೇವಾನಂದ ನಾಯಕ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಾಲ್ಕೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮಹೇಶ ಮಂದಾರ್ತಿ ನಿರ್ದೇಶನದಲ್ಲಿ 'ಧ್ರುವ ಚರಿತ್ರೆ' ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ನರಸಿಂಹ ತುಂಗ ಅವರ ನಿರ್ದೇಶನದಲ್ಲಿ 'ಶ್ರೀಕೃಷ್ಣ ಪಾರಿಜಾತ' ಯಕ್ಷಗಾನ ಪ್ರದರ್ಶನಗೊಂಡಿತು.