ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಉಡುಪಿ: ದೇಸೀಯ ಅನೇಕ ಕಲೆಗಳು ಪ್ರೋತ್ಸಾಹವಿಲ್ಲದೆ ನಶಿಸುತ್ತಲಿದೆ. ಆದರೆ, ಯಕ್ಷಗಾನ ಕಲೆಯು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಚಾರ, ಬೆಳವಣಿಗೆ ಕಾಣುತ್ತಿದೆ. ವೇಷದಲ್ಲಿ ವಿಶೇಷ ಆಕರ್ಷಣೆ ಹೊಂದಿರುವ ಪರಿಪೂರ್ಣವಾದ ಕಲೆಯಾಗಿದ್ದು, ಜಗನ್ಮಾನ್ಯವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಕಲಾರಂಗ ರಂಗ ಉಡುಪಿ (ರಿ.) ಹಾಗೂ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ವತಿಯಿಂದ ಡಿ.18ರ ವರೆಗೆ ನಡೆಯಲಿರುವ ಉಡುಪಿಯ 25 ಪ್ರೌಢಶಾಲಾ ವಿದ್ಯಾರ್ಥಿಗಳ "ಕಿಶೋರ ಯಕ್ಷಗಾನ ಸಂಭ್ರಮ-2025'ಕ್ಕೆ ಮಂಗಳವಾರ (ಡಿ.2) ಚಾಲನೆ ನೀಡಿ ಆಶೀರ್ವಚನ ನೀಡಿದರು.
ಪರ್ಯಾಯದ ಸಂಪ್ರದಾಯ
ನಮ್ಮ 3ನೇ ಪರ್ಯಾಯದ ಸಂದರ್ಭದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಆರಂಭಿಸಲಾಗಿದ್ದು, ಈಗ 4ನೇ ಪರ್ಯಾಯದ ಚಕ್ರದಂತೆ ಯಕ್ಷ ಚಕ್ರವೂ ಪೂರ್ಣಗೊಂಡಿದೆ. ಉಡುಪಿಯ ಎಲ್ಲ ಅಷ್ಟ ಮಠಗಳ ಯತಿಗಳೂ ಸಹ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದು, ಎಲ್ಲರ ಪರ್ಯಾಯದ ಸಂಪ್ರದಾಯ ಎಂಬಂತಾಗಿದೆ. ಯಕ್ಷಗಾನಕ್ಕೆ ಬೆಂಬಲ ನೀಡದಿದ್ದರೆ ಪರ್ಯಾಯಕ್ಕೆ ನ್ಯೂನ ಎಂಬತಾಗಿದೆ. ಹಿಂದೆ ರಾಜಾಶ್ರಯ ಪಡೆದಿದ್ದ ಈ ಕಲೆ ಮಠ-ದೇಗುಲಗಳ ಸಹಕಾರದಲ್ಲಿ ಮುನ್ನಡೆಯುತ್ತಿದ್ದು ಚಿರಸ್ಥಾಯಿಯಾಗಲಿ ಎಂದು ಶ್ರೀಗಳು ಹಾರೈಸಿದರು.
4ನೇ ಆವೃತ್ತಿಯ ಸಂಭ್ರಮ
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಸುಗುಣೇಂದ್ರ ಶ್ರೀಗಳಿಂದಲೇ ಉದ್ಘಾಟನೆ ಗೊಂಡಿದ್ದ ಯಕ್ಷ ಶಿಕ್ಷಣ ಟ್ರಸ್ಟ್ ತನ್ನ ಬದ್ಧತೆಯನ್ನು ಚಾಚೂತಪ್ಪದೆ ನಿರ್ವಹಿಸುತ್ತಿದೆ. ಕಿಶೋರ ಯಕ್ಷಗಾನ ಸಂಭ್ರಮದ 4ನೇ ಆವೃತ್ತಿ ಇದಾಗಿದ್ದು, ಒಂದು ವೃತ್ತ ಪೂರ್ಣಗೊಂಡಿದೆ. ಅನ್ಯ ಜಿಲ್ಲೆ, ಅನ್ಯ ರಾಜ್ಯದ ಮಕ್ಕಳೂ ಅಭಿನಯಿಸುತ್ತಿದ್ದಾರೆ. ಕ್ರೈಸ್ತ ಹಾಗೂ ಮುಸ್ಲಿಂ ವಿದ್ಯಾರ್ಥಿಗಳೂ ಸಹ ಅಭಿನಯಿಸುತ್ತಿರುವುದು ವಿಶೇಷ. ಟ್ರಸ್ಟ್ ವತಿಯಿಂದ ವಿಶ್ವಕ್ಕೆ ಈ ಕಲೆಯನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ಶುಭಾಶಂಸನೆ ನೆರವೇರಿಸಿದರು. ಯಕ್ಷ ಶಿಕ್ಷಣ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಕೆ.ರಘುಪತಿ ಭಟ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್, ಉಪಾಧ್ಯಕ್ಷ ಎಸ್.ವಿ. ಭಟ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಯಕ್ಷ ಶಿಕ್ಷಣ ಟ್ರಸ್ಟ್ನ ವಿಶ್ವಸ್ಥೆ ವಿದ್ಯಾ ಪ್ರಸಾದ್ ವಂದಿಸಿದರು.
ಯಕ್ಷಗಾನ ಪ್ರದರ್ಶನ
ಸಭಾ ಕಾರ್ಯಕ್ರಮದ ಬಳಿಕ ಮೊದಲ ದಿನದ ಪ್ರಥಮ ಪ್ರದರ್ಶನವಾಗಿ ಯಕ್ಷಗುರು ಚರಿತ್ ಅಭಿಮನ್ಯು ಹೇರೂರು ನಿರ್ದೇಶನದಲ್ಲಿ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳಿಂದ 'ವೀರ ಅಭಿಮನ್ಯು' ಪ್ರಸಂಗ ಹಾಗೂ ಎರಡನೇಯದಾಗಿ ಯಕ್ಷಗುರು ಕೃಷ್ಣಮೂರ್ತಿ ಭಟ್ ನಿರ್ದೇಶನದಲ್ಲಿ ಕಡಿಯಾಳಿಯ ಯು.ಕಮಲಾಬಾಯಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ 'ಶ್ವೇತಕುಮಾರ' ಯಕ್ಷಗಾನ ಪ್ರದರ್ಶನಗೊಂಡಿತು.
"
ಅನೇಕ ಪ್ರಕಾರದ ಕಲೆಗಳಲ್ಲಿ ಯಕ್ಷಗಾನ ಪ್ರಮುಖವಾಗಿದೆ. ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದ್ದು, ಕನ್ನಡ ಭಾಷಾ ಪ್ರೌಢಿಮೆಗೂ ಸಹಕಾರಿ. ಪೌರಾಣಿಕ ವಿಷಯಗಳನ್ನು ಓದಿ ತಿಳಿದುಕೊಳ್ಳಲು ಇಂದಿನವರಿಗೆ ಸಮಯವಿಲ್ಲ. ಆದರೆ, ಯಕ್ಷಗಾನ ಪ್ರದರ್ಶನ ನೋಡಿದರೆ ಪೌರಾಣಿಕ ಮಾಹಿತಿ ಸಾದೃಶವಾಗಿ ತಿಳಿಯುತ್ತದೆ.