ಯಕ್ಷಗಾನ ಸಮಗ್ರ ರಂಗಭೂಮಿ: ಪ್ರೊ.ಎಂ.ಎಲ್​.ಸಾಮಗ

ಉದ್ಯಮಿ ಹಾಗೂ ಶಿಕ್ಷಣ ತಜ್ಞ ಹರಿಪ್ರಸಾದ್​ ರೈ ಅಳವು ಅರಿಯದ ಭಾಷೆ ಕೃತಿಯನ್ನು ಬಿಡುಗಡೆ ಮಾಡಿದರು.
ಉದ್ಯಮಿ ಹಾಗೂ ಶಿಕ್ಷಣ ತಜ್ಞ ಹರಿಪ್ರಸಾದ್​ ರೈ ಅಳವು ಅರಿಯದ ಭಾಷೆ ಕೃತಿಯನ್ನು ಬಿಡುಗಡೆ ಮಾಡಿದರು.
Published on
ಉಡುಪಿ: ಸಂಗೀತ, ನೃತ್ಯ, ಬಣ್ಣದ ವೇಷ, ಸಂಭಾಷಣೆ ಸಹಿತ ರಂಗಭೂಮಿಯ ಸಮಗ್ರ ಪ್ರಕಾರಗಳನ್ನು ಒಳಗೊಂಡ ವಿಶಿಷ್ಟ ಕಲೆ ಯಕ್ಷಗಾನ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್​.ಸಾಮಗ ಹೇಳಿದರು.

ಬುಧವಾರ ಡಾ. ಶಿವರಾಮ ಕಾರಂತ ಟ್ರಸ್ಟ್​, ಕನ್ನಡ ಮತ್ತು ಸಂಸತಿ ಇಲಾಖೆ, ಯಕ್ಷಗಾನ ಕೇಂದ್ರ, ಎಂಜಿಎಂ ಸಂಧ್ಯಾ ಕಾಲೇಜು ಸಹಯೋಗದಲ್ಲಿ ನಡೆದ ಯಕ್ಷಗಾನ ಮತ್ತು ಕಾರಂತರು ವಿಚಾರಗೋಷ್ಠಿ ಉದ್ಘಾಟಿಸಿ, ಮಾತನಾಡಿದರು.

ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಯಕ್ಷಗಾನ ಅಧ್ಯಯನ ವಸ್ತುವಾಗಿದೆ. ಡಾ.ಶಿವರಾಮ ಕಾರಂತರು ಯಕ್ಷಗಾನದ ಬಗ್ಗೆ ಹೆಚ್ಚಿನ ಅಧ್ಯಯನ, ಸಂಶೋಧನೆ ನಡೆಸಿ, ಹೊಸದೃಷ್ಟಿಕೋನದಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ.ನಿತ್ಯಾನಂದ ಬಿ. ಶೆಟ್ಟಿ ಯಕ್ಷಗಾನ ಕಲಾ ಮೀಮಾಂಸೆ ಮತ್ತು ಅಧ್ಯಯನ: ಕಾರಂತರ ದೃಷ್ಟಿಕೋನ ವಿಷಯವಾಗಿ ಉಪನ್ಯಾಸ ನೀಡಿ, ಕಲೆ, ರಂಗಭೂಮಿ, ಪ್ರಜಾತಂತ್ರ ಪ್ರತ್ಯೇಕ ವಿಷಯಗಳಲ್ಲ. ಕಲೆಯ ಬಗ್ಗೆ ಕಾರಂತರು 6 ಪುಸ್ತಕಗಳನ್ನು ಬರೆದಿದ್ದಾರೆ. ಸೌಂದರ್ಯ ಪ್ರಜ್ಞೆ ಮನುಷ್ಯನಿಗೆ ಇರಲೇಬೇಕಾದ ಗುಣ ಎಂದು ಕಾರಂತರು ಪ್ರತಿಪಾದಿಸಿದ್ದರು. ಯಕ್ಷಗಾನ ಬ್ಯಾಲೆ ಮೂಲಕ ಐರೋಪ್ಯ ಕಲೆಗಳಿಗೆ ಸಮಾನಾಂತರವಾಗಿ ಭಾರತೀಯ ಕಲಾಪ್ರಕಾರಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಕಾರಂತರು ಮಾಡಿದ್ದಾರೆ. ಭಾರತೀಯ ರಂಗ ಕಲೆಗಳಿಗೆ ಹೊಸ ಹುಟ್ಟು ನೀಡಿದ್ದಾರೆ ಎಂದರು.

ಉದ್ಯಮಿ ಹಾಗೂ ಶಿಕ್ಷಣ ತಜ್ಞ ಹರಿಪ್ರಸಾದ್​ ರೈ ಅಳವು ಅರಿಯದ ಭಾಷೆ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಡಾ. ಶಿವರಾಮ ಕಾರಂತ ಟ್ರಸ್ಟ್​ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ನಾಯಕ್​, ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್​ ಹೆಗ್ಡೆ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಮಾತನಾಡಿದರು. ಎಂಜಿಎಂ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ವಿಶ್ವನಾಥ್​ ಪೈ, ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್​ ಶೆಟ್ಟಿ ಉಪಸ್ಥಿತರಿದ್ದರು. ಭೂಮಿಕಾ ಪ್ರಾರ್ಥಿಸಿದರು. ಡಾ.ಶಿವರಾಮ ಕಾರಂತ ಟ್ರಸ್ಟ್​ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಟ್ರಸ್ಟ್​ ಸದಸ್ಯ ಸತೀಶ್​ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಕಾರಂತ ಟ್ರಸ್ಟ್​ ಸದಸ್ಯ ಶರೀಫ್​ ಹೂಡೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net