ಚುನಾವಣೆ ನಡೆಸದ್ದರಿಂದ ರಾಜ್ಯಕ್ಕೆ 15ನೇ ಹಣಕಾಸು ತಡೆ

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ.
Published on

* ಅಧಿವೇಶನದಲ್ಲಿ ಸಂಸದ ಕೋಟ ಪ್ರಶ್ನೆಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಉಡುಪಿ: ರಾಜ್ಯದಲ್ಲಿ ಸಕಾಲಕ್ಕೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಿಲ್ಲವಾದ್ದರಿಂದ 15ನೇ ಹಣಕಾಸು ಆಯೋಗದ ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರಗಳಿಗೆ ಹಣ ಬಿಡುಗಡೆ ಮಾಡಲು ಅವಕಾಶವಿಲ್ಲ. ಅಲ್ಲದೆ, ರಾಜ್ಯದಲ್ಲಿ ಸಮರ್ಪಕ ಚುನಾಯಿತ ಸ್ಥಳಿಯಾಡಳಿತ ಸಂಸ್ಥೆ ಅಧಿಕಾರದಲ್ಲಿದ್ದರೆ ಮಾತ್ರ ಅನುದಾನ ಬಿಡುಗಡೆ ಮಾಡಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ 15ನೇ ಹಣಕಾಸು ಆಯೋಗದ ಹಣ ಪಾವತಿ ಮಾಡಿಲ್ಲವೆಂಬ ಮಾಹಿತಿ ಹಿನ್ನೆಲೆಯಲ್ಲಿ ಸಂಸದ ಕೋಟ ಪೂಜಾರಿ ಅವರು ಗುರುವಾರ (ಏ.2)ದ ಸಂಸತ್​ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಕೇಂದ್ರ ಸರ್ಕಾರದ ಪರವಾಗಿ ಪಂಚಾಯತ್​ ರಾಜ್​ ಸಚಿವ ರಾಜೀವ್​ ರಂಜನ್​ ಸಿಂಗ್​ ಅವರು ಲಿಖಿತ ಉತ್ತರ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರದಿಂದ ವಿಳಂಬ

2020&21ರಿಂದ 2024-25ರ ಅವಧಿಗೆ ಸಂಬಂಧಿಸಿ 15ನೇ ಹಣಕಾಸು ಆಯೋಗದ ಗ್ರಾಮೀಣ ಸ್ಥಳಿಯ ಸಂಸ್ಥೆಗಳಿಗೆ ಅನುದಾನದ ಎಲ್ಲ ಕಂತುಗಳನ್ನು ಕರ್ನಾಟಕದ ಅರ್ಹ ಗ್ರಾಪಂಗಳಿಗೆ ಬಿಡುಗಡೆ ಮಾಡಲಾಗಿದೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಗ್ರಾಪಂಗಳಿಗೆ ವಿಳಂಬ ಹಾಗೂ ಅಪೂರ್ಣವಾಗಿ ವರ್ಗಾಯಿಸಿದೆ. ಇದರಿಂದ ವಿಳಂಬ ವರ್ಗಾವಣೆಗೆ ಸಂಬಂಧಿಸಿ ದಂಡದ ಬಡ್ಡಿಯನ್ನೂ ಬಿಡುಗಡೆ ಮಾಡದಿರುವುದರಿಂದ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಕೇಂದ್ರ ತಿಳಿಸಿದೆ.

ಪ್ರಮಾಣ ಪತ್ರ ಅಗತ್ಯ

15ನೇ ಹಣಕಾಸಿನ ಆಯೋಗದಂತೆ ಪ್ರತಿ ಹಣಕಾಸು ವರ್ಷದಲ್ಲಿ ಎರಡು ಕಂತು ಮೂಲಕ ರಾಜ್ಯಗಳಿಗೆ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿದ್ದು, ಆ ಕಂತುಗಳಿಗೆ ನಿಗದಿತ ನಮೂನೆಯಲ್ಲಿ ಅನುದಾನ ವರ್ಗಾವಣೆ ಪ್ರಮಾಣ ಪತ್ರ (ಗ್ರ್ಯಾಂಟ್​ ಟ್ರಾನ್ಸಫರ್​ ಸರ್ಟಿಫಿಕೇಟ್​)ವನ್ನೂ ಆಯಾ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿದೆ ಎಂದು ಕೇಂದ್ರ ಪಂಚಾಯತ್​ ರಾಜ್​ ಸಚಿವರು ತಿಳಿಸಿದ್ದಾಗಿ ಸಂಸದ ಕೋಟ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net