ಕುವೆಂಪು ವಿಶ್ವ ಮಾನವ ಸಂದೇಶ ಸಮಾಜ ಸುಧಾರಣೆಗೆ ದಾರಿ: ಗಫೂರ್

 ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿದರು.
Published on
ಉಡುಪಿ: ಡಾ.ಬಿ.ಆರ್​ ಅಂಬೇಡ್ಕರ್​, ಬಸವಣ್ಣ, ಬುದ್ದ ಮತ್ತಿತರ ಮಹನೀಯರ ಆಚಾರ-ವಿಚಾರಧಾರೆಗಳನ್ನು ಹೊಸ ರೂಪದಲ್ಲಿ ನಾಡಿಗೆ ಪರಿಚಯಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು, ಸಮಾಜದಲ್ಲಿ ಪ್ರತಿಯೊಬ್ಬರೂ ಸಾಮರಸ್ಯದಿಂದ ಜೀವನ ನಡೆಸಬೇಕು ಎಂಬ ಆಶಯದೊಂದಿಗೆ ಜಗತ್ತಿಗೆ ಸಾರಿದ ವಿಶ್ವ ಮಾನವ ಸಂದೇಶ ಪರಿಕಲ್ಪನೆ ಅಳವಡಿಸಿಕೊಂಡಾದ ಸಮಾಜ ಸುಧಾರಣೆ ಸಾಧ್ಯ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜು (ಬೋರ್ಡ್​ ಹೈಸ್ಕೂಲ್​) ಜನತಾ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಜಾತಿ, ಮತ, ಧರ್ಮ, ಪಂಥಕ್ಕೆ ಆದ್ಯತೆ ನೀಡದೇ ಮಾನವೀಯ ಧರ್ಮ ಮೇಲು ಎಂಬ ಆಶಾ ಭಾವನೆಯೊಂದಿಗೆ ಕುವೆಂಪು ನೀಡಿದ ವಿಶ್ವ ಮಾನವ ಸಂದೇಶ ಮನುಕುಲಕ್ಕೆ ಮಾದರಿ. ಅವರ ಸಾಹಿತ್ಯಗಳನ್ನು ವಿದ್ಯಾರ್ಥಿಗಳು ಓದಿ, ಅರ್ಥೈಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು. ಅವರ ಕಥೆ, ಕಾದಂಬರಿ, ಕಾವ್ಯ, ಮಹಾಕಾವ್ಯ, ವಿಮರ್ಶೆ, ಪ್ರಬಂಧ, ಜೀವನ ಚರಿತ್ರೆ, ನಾಟಕಗಳಲ್ಲಿ ಅಡಿಗಿದ ಬದುಕಿನ ಸಾರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ದಾರಿದೀಪವಾಗಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿಶ್ವ ಮಾನವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು. ಪ್ರತಿಯೊಬ್ಬರಲ್ಲೂ ಸಮಾನತೆ, ಒಳ್ಳೆಯದನ್ನು ಬಯಸುವ ಗುಣವಿದ್ದಾಗ ಮಾನವ ಕಲ್ಪನೆ ಮೂಡುತ್ತದೆ ಎಂದರು.
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣುಮೂರ್ತಿ ಪ್ರಭು ಉಪನ್ಯಾಸ ನೀಡಿ, ಸತ್ವಯುತವಾದ ಸಾಹಿತ್ಯವನ್ನು ರಚಿಸುವುದರೊಂದಿಗೆ ಜಾತಿ, ಮತ, ಧರ್ಮದ ಗಡಿಗಳನ್ನು ಮೀರಿ ಎಲ್ಲರೂ ಮಾನವರೇ, ಮಾನವೀಯತೆಯೇ ದೊಡ್ಡ ಧರ್ಮ ಎಂಬ ಸಂದೇಶ ಸಾರಿರುವ ರಾಷ್ಟ್ರಕವಿ ಕುವೆಂಪು ಸಾಹಿತ್ಯ ಲೋಕದಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕರುನಾಡಿಗೆ ತಂದುಕೊಟಿದ್ದರು. ಕುವೆಂಪು ಕಾವ್ಯಗಳಲ್ಲಿನ ತತ್ವಗಳನ್ನು ಮಾದರಿಯಾಗಿಟ್ಟುಕೊಂಡು ವಿದಾರ್ಥಿಗಳೂ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್​ ಸಿ., ಕಾಲೇಜಿನ ಪ್ರಾಂಶುಪಾಲೆ ಲೀಲಾಭಟ್​ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವರ್ಷಾ ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕಿ ಭಾಗೀರಥಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net