

ಉಳ್ಳಾಲ: ಕೋಟೆಕಾರು ಬೀರಿಯಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ದೆಹಲಿ ಮೂಲದ ಶಾಕೀರ್ ಹಾಗೂ ಹೈದರ್ ಎಂಬುವರು ಗುರುವಾರ ಮಧ್ಯಾಹ್ನ ಕೆಳಗೆ ಬಿದ್ದಿದ್ದು, ಶಾಕೀರ್ ಸ್ಥಿತಿ ಗಂಭೀರವಾಗಿದೆ.
ಉಚ್ಚಿಲ ಅಜ್ಜಿನಡ್ಕದಲ್ಲಿರುವ ಹೋಲ್‌ಸೇಲ್ ಬೇಕರಿ ಖಾದ್ಯಗಳನ್ನು ತಯಾರಿಸುವ ತಮಿಳುನಾಡು ಮೂಲದ ಉದಯ ಕುಮಾರ್ ಎಂಬುವರು ಬೀರಿಯಲ್ಲಿ ಐದು ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದಾರೆ. ಮಧ್ಯಾಹ್ನ ಎರಡನೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ತಕ್ಷಣ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.