ಮಂಜೇಶ್ವರ ಮೀನುಗಾರಿಕಾ ಬಂದರು ಕಾಮಗಾರಿ ಅಪೂರ್ಣ

 ಮಂಜೇಶ್ವರ ಮೀನುಗಾರಿಕಾ ಬಂದರು.
ಮಂಜೇಶ್ವರ ಮೀನುಗಾರಿಕಾ ಬಂದರು.
Published on

ಮಂಜೇಶ್ವರ: ಕೇರಳದ ದೊಡ್ಡ ಮತ್ತು ಮಧ್ಯಮ ಬಂದರುಗಳನ್ನು ಸಂಪರ್ಕಿಸುವ ಮೂಲಕ ಜಲಮಾರ್ಗ ಸರಕು ಸಾಗಣೆಗೆ ಸಮಗ್ರ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಅರ್ಧಕ್ಕೆ ಸ್ಥಗಿತಗೊಂಡಿರುವ ಮಂಜೇಶ್ವರ ಮೀನುಗಾರಿಕಾ ಬಂದರನ್ನು ಸಾಕಾರಗೊಳಿಸಲು ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯಲ್ಲಿ ಸೇರಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

ಉಮ್ಮನ್ ಚಾಂಡಿ ಸರ್ಕಾರದ ಅವಧಿಯಲ್ಲಿ ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ಮಂಜೇಶ್ವರ ಮೀನುಗಾರಿಕಾ ಬಂದರು ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಆದರೆ ಇಚ್ಛಾಶಕ್ತಿ ಕೊರತೆಯಿಂದಾಗಿ ಯೋಜನೆ ಅರ್ಧಕ್ಕೆ ನಿಂತಿದೆ. ಮಂಜೇಶ್ವರ ಕಡೆಯಿಂದ ಬಂದರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ನಿರ್ಮಾಣ ಕಂಬಗಳಿಗೆ ಸೀಮಿತವಾಗಿದೆ. ಈ ಸೇತುವೆ ಪೂರ್ಣಗೊಳ್ಳದ ಹೊರತು ಬಂದರು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ವಿಧಾನಸಭೆಯಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದ ಶಾಸಕ ಎ.ಕೆ.ಎಂ.ಅಶ್ರಫ್, ಬಂದರು ಸೇತುವೆ ನಿರ್ಮಾಣದ ಅಗತ್ಯತೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದರು.

ಪ್ರಸ್ತುತ ವಾಹನಗಳು ಉಪ್ಪಳ ಮೂಲಕ ಬಂದರನ್ನು ತಲುಪುತ್ತವೆ. ಆದರೆ ಕಿರಿದಾದ ರಸ್ತೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು ಮೀನುಗಾರರು ಮತ್ತು ವ್ಯಾಪಾರಿಗಳು ತೊಂದರೆ ಎದುರಿಸುತ್ತಿದ್ದಾರೆ.
ಮೂಲ ಸೌಕರ್ಯ ಮತ್ತು ಸೇತುವೆ ಇಲ್ಲದೆ ಮೀನುಗಾರರಿಗೆ ಬಂದರಿನ ಪ್ರಯೋಜನ ಪೂರ್ಣಪ್ರಮಾಣದಲ್ಲಿ ಸಿಗುತ್ತಿಲ್ಲ. ಸೇತುವೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂಬ ಬೇಡಿಕೆ ವರ್ಷಗಳಿಂದ ಇದೆ. ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯಡಿ ಮಂಜೇಶ್ವರ ಬಂದರು ಅಭಿವೃದ್ಧಿ ಕಾಮಗಾರಿಗಳು ಸಾಕಾರಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.

ಮಂಜೇಶ್ವರ ಬಂದರಿನಲ್ಲಿ ಪೂರ್ಣ ಪ್ರಮಾಣದ ಕಾರ್ಯಚಟುವಟಿಕೆಗಳಿಗೆ ಸೇತುವೆ ನಿರ್ಮಾಣ ಅನಿವಾರ್ಯ. ಈ ನಿಟ್ಟಿನಲ್ಲಿ ನೂತನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯಲ್ಲಿ ಬಂದರು ಸೇರ್ಪಡೆಗೊಳಿಸುವ ಬಗ್ಗೆಯೂ ತಿಳಿಸಲಾಗಿದೆ.

— ಎ.ಕೆ.ಎಂ.ಅಶ್ರಫ್, ಮಂಜೇಶ್ವರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net