_1788170552861.webp?w=480&auto=format%2Ccompress&fit=max)
_1788170552861.webp?w=480&auto=format%2Ccompress&fit=max)
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ನೆಕ್ಕಿಲಾಡಿ ಗ್ರಾಮದ ಕರುವೇಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಉಪಕೇಂದ್ರದಿಂದ ಕೊಯಿಲ ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಲೈನ್ ಕಾಮಗಾರಿ ಸಲುವಾಗಿ ಹಾಕಲಾಗಿರುವ ಬೃಹತ್ ಗಾತ್ರದ ವಿದ್ಯುತ್ ಕಂಬಗಳು ಮಳೆಗಾಲದಲ್ಲಿ ವಾಲಿ ಕಳವಳ ಹುಟ್ಟಿಸಿದ್ದವು.
ಬೃಹತ್ ಕಂಬಗಳ ಬುಡದಿಂದಲೇ ಹಾಕಬೇಕಾಗಿದ್ದ ಕಾಂಕ್ರೀಟ್ ಬೆಡ್ಡನ್ನು ಬುಡದ ಬದಲು ಮಣ್ಣಿನ ಮೇಲ್ಭಾಗದಿಂದ ಹಾಕಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಬರತೊಡಗಿದ್ದು, ಪ್ರಾಣಾಪಾಯಕ್ಕೆ ಕಾರಣವಾಗಲಿರುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಬೇಕಾಗಿದೆ.
ಕೊಯಿಲದಲ್ಲಿ 33 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ 13 ಕೋಟಿ ರೂ. ಮಂಜೂರು ಆಗಿ ಅಲ್ಲಿನ ಕಟ್ಟಡ ಕಾಮಗಾರಿ ಆಗಿ, ಅದಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಜೋಡಣೆಯೂ ಆಗಿದೆೆ. ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೊಯಿಲದಿಂದ ಕರುವೇಲ್ ತನಕ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕಂಬ ಹಾಕುವ ಕೆಲಸ ನಡೆಯುತ್ತಿದ್ದು. ಈ ಕೆಲಸ ಮೈಸೂರು ಮೂಲದ ಗುತ್ತಿಗೆದಾರರೋರ್ವರು ಗುತ್ತಿಗೆ ವಹಿಸಿಕೊಂಡು ಸ್ಥಳೀಯ ವಿದ್ಯುತ್ ಗುತ್ತಿಗೆದಾರರೋರ್ವರಿಗೆ ಉಪಗುತ್ತಿಗೆ ನೀಡಿರುವುದಾಗಿ ಹೇಳಲಾಗುತ್ತಿದೆ.
ಬಹುತೇಕ ಕಾಮಗಾರಿ ಪೂರ್ಣ
ಹೆದ್ದಾರಿ ಬದಿ ಬೃಹತ್ ವಿದ್ಯುತ್ ಕಂಬಗಳನ್ನು ನಿಲ್ಲಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಆದರೆ ಅಳವಡಿಸಲಾದ ಕಂಬಗಳಿಗೆ ಕಾಂಕ್ರೀಟ್ ಮಿಶ್ರಣ ಹಾಕದೆ ಮಳೆಗಾಲದಲ್ಲಿ ಪರಿಸರದಲ್ಲಿ ಮಣ್ಣು ಮೆದುವಾದೊಡನೆ ಹಿಡಿತ ಕಳೆದುಕೊಂಡು ಕೆಲವೆಡೆ ಬೃಹತ್ ಕಂಬ ವಾಲಿ ಅಪಾಯಕಾರಿ ಸ್ಥಿತಿ ಮೂಡಿಸಿತ್ತು. ಇದೀಗ ಕಾಂಕ್ರೀಟ್ ಮಿಶ್ರಣ ಹಾಕುತ್ತಿದ್ದಾರೆ. ಆದರೆ ಮಣ್ಣಿನ ಮೇಲ್ಭಾಗದಲ್ಲಿಯೇ ಕಂಬಗಳಿಗೆ ಪಟ್ಟಿ ಕಟ್ಟಿ ಕಾಂಕ್ರೀಟ್ ಮಿಶ್ರಣ ಹಾಕಲಾಗುತ್ತಿದೆ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಕಾಮಗಾರಿ ವೇಳೆಯೇ ಎಚ್ಚರಿಸಿದ್ದೆವು
ಕಾಮಗಾರಿ ಬಗ್ಗೆ ದೂರುಗಳು ಸತತವಾಗಿ ಕೇಳಿ ಬರುತ್ತಿದ್ದವು. ಆದರೆ ಖುದ್ದು ಕಾಮಗರಿ ವೀಕ್ಷಿಸಲು ಹೋದಾಗ ಮಣ್ಣಿನ ಮೇಲ್ಭಾಗದಲ್ಲಿಯೇ ಪಟ್ಟಿ ಅಳವಡಿಸಿ ಕಾಂಕ್ರೀಟ್ ಮಿಶ್ರಣ ಹಾಕುವ ಸಿದ್ಧತೆ ನಡೆಸುತ್ತಿರುವುದು ಕಂಡುಬಂದಿದೆ. ವಿದ್ಯುತ್ ಕಂಬಕ್ಕೆ ಸುರಕ್ಷತಾ ವ್ಯವಸ್ಥೆ ಅಳವಡಿಸದೆ ಗಾಳಿ, ಮಳೆಗೆ ಕುಸಿಯುವಂತಾದರೆ ಜೀವಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಕಾಮಗಾರಿಯಲ್ಲಿ ಯಾವ ಕಾರಣಕ್ಕೂ ಅವೈಜ್ಞಾನಿಕವಾಗಿ ನಡೆಯಲು ಬಿಡಬಾರದು.
— ರೂಪೇಶ್ ರೈ ರೈತ ಸಂಘದ ಮುಂದಾಳು
ಬೃಹತ್ ವಿದ್ಯುತ್ ಕಂಬ ಅಳವಡಿಸುವ ಕಾರ್ಯದ ಮೇಲುಸ್ತುವಾರಿ ಈ ಹಿಂದಿನ ಎಇ ನೋಡಿಕೊಳ್ಳುತ್ತಿದ್ದರು. ಅವರು ವರ್ಗಾವಣೆಗೊಂಡಿದ್ದು, ಪ್ರಸಕ್ತ ಪ್ರಭಾರ ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಬೃಹತ್ ಕಂಬ ಅಳವಡಿಸಿದ ಬಳಿಕ ಕೊನೆ ಹಂತವಾಗಿ 4 ಅಡಿ ಸುತ್ತಳತೆಯ ಕಾಂಕ್ರೀಟ್ ಕವಚ ನಿರ್ಮಾಣದಲ್ಲಿ ಲೋಪಗಳೇನಾದರೂ ಆಗಿದ್ದಲ್ಲಿ ಪರಿಶೀಲನೆ ನಡೆಸಿ ಇಲಾಖಾತ್ಮಕ ಕ್ರಮ ಜರುಗಿಸಲಾಗುವುದು.
— ರಾಜೇಶ್, ಉಪ್ಪಿನಂಗಡಿ ವಲಯ ಮೆಸ್ಕಾಂ ಎಇ (ಪ್ರಭಾರ)