

ಉಡುಪಿ: ಮದುವೆಯಾಗಲು ವಧುವನ್ನು ಹುಡುಕುತ್ತಿರುವುದನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಗೆ ಬರೋಬ್ಬರಿ 42.97 ಲಕ್ಷ ರೂ. ವಂಚಿಸಿದ ಮಹಿಳೆ ಹಾಗೂ ಆಕೆಯ ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿ ಸೇರಿ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಎಸ್. ಕಡಂಬಿ ವಿದ್ಯಾ ಕೇಂದ್ರದ ಕಾಲೇಜ್ನಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವಾಗಿ ತಿಳಿಸಿದ ಹಾಗೂ ಮೂಲತ; ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಬಡಬೆಟ್ಟು ಹೆಣ್ಬೇರು ನಿವಾಸಿ ನಾಗರತ್ನಾ ಎಚ್. (42), ಬೆಂಗಳೂರಿನ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಬಾಲಾಜಿ ಲಾಡ್ಜ್ ಮತ್ತು ರೆಸ್ಟ್ ಹೌಸ್ನಲ್ಲಿ ನೆಲೆಸಿದ್ದ ಮೂಲತ; ಕಾರ್ಕಳ ತಾಲೂಕಿನ ಮೀಯಾರು ಚರ್ಚ್ ಸಮೀಪದ ನಿವಾಸಿ ಹೇಮಂತ ಕರ್ಕೇರ (41) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆ ವಿವರ
ಮಹಿಳೆಯಿಂದ ವಂಚನೆಗೊಳಗಾದ ಉಡುಪಿಯ ಪ್ರದೀಪ ಕೆ. ಎಂಬವರು ಉಡುಪಿಯ ಸೌಹಾರ್ದ ಸಹಕಾರಿ ಸಂಘವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಬೇಕೆಂದು ಹುಡುಗಿಯ ಹುಡುಕಾಡ ನಡೆಸಿದ್ದರು. ಕನ್ನಡ ಜೋಡಿ ಮೆಟ್ರೋಮೊನಿ ಆ್ಯಪ್ ಪರಿಶೀಲಿಸಿದ್ದು, ಬೆಂಗಳೂರಿನಲ್ಲಿ ಶಿಕ್ಷಕಿಯಾಗಿದ್ದಾಳೆಂದು ಮಾಹಿತಿ ಇದ್ದ ನಾಗರತ್ನಾ ಎಚ್. ಎಂಬವರ ಪರಿಚಯವಾಗಿತ್ತು. ಆಕೆ ತನ್ನ ವಿವಾಹದ ಬಗ್ಗೆ ಮಾತನಾಡಿದ್ದಳು. ಆದರೆ, ಅವಳ ಪ್ರಸ್ತಾಪವನ್ನು ಒಪ್ಪದ ಪ್ರದೀಪ, ತನ್ನದೇ ಜಾತಿಯ ಹುಡುಗಿಯನ್ನೇ ಮದುವೆ ಆಗುವುದಾಗಿ ತಿಳಿಸಿ ಅವಳನ್ನು ನಿರಾಕರಿಸಿದ್ದರು.
ಆದರೂ ನಾಗರತ್ನಾ ಮತ್ತೆ ಫೋನ್ ಕರೆ ಹಾಗೂ ಮೆಸೇಜ್ ಮಾಡಿಕೊಂಡಿದ್ದು, ನಂತರದ ದಿನಗಳಲ್ಲಿ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಳು. ಅಲ್ಲದೆ, ಹಂತ ಹಂತವಾಗಿ ತನ್ನ ಖಾತೆಗೆ ಲಕ್ಷಾಂತರ ರೂ. ಹಣ ಪಡೆದಿದ್ದಳು. ಅಲ್ಲದೆ, ತನ್ನ ಕಾಲೇಜ್ನಲ್ಲಿ ಕೆಲಸ ಮಾಡುವ ಸಹೋದ್ಯೋಗಿ ಹೇಮಂತ್ ಕರ್ಕೇರ ಎಂಬವರ ಖಾತೆಗೆ, ಚಿಕ್ಕಮ್ಮನ ಮಗ ಪ್ರಮೋದ ಎಂಬವರ ಖಾತೆಗೆ ಮತ್ತು ಅಕ್ಕ ರೇಣುಕಾ ಎಂಬವರ ಖಾತೆಗೂ ಎರಡು ವರ್ಷದಿಂದ ಒಟ್ಟು 42,97,350 ರೂ. ಹಣ ವರ್ಗಾಯಿಸಿಕೊಂಡಿದ್ದಳು.
ಅಕ್ರಮ ಸಂಬಂಧದ ಬೆದರಿಕೆ
2 ವರ್ಷವಾದರೂ ಪಡೆದ ಹಣ ವಾಪಸ್ ನೀಡಿಲ್ಲ. ಕೂಡಲೇ ಹಣ ಮರಳಿಸಿ ಎಂದು ಪ್ರದೀಪ ಕೇಳಿದ್ದರು. ಆದರೆ, ಆ ಮಹಿಳೆ ಹಣ ಕೊಡುವುದಿಲ್ಲ. ಹಣ ಕೇಳಿದರೆ ನನ್ನೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದಾಳೆ. ಅಲ್ಲದೆ, ಕೆಲಸ ಮಾಡುವ ಉಡುಪಿ ಕಚೇರಿಗೆ ಬಂದು ಸಿಬ್ಬಂದಿ ಮತ್ತು ಗ್ರಾಹಕರ ಎದುರು ಮಾನ ಹರಾಜು ಹಾಕುವುದಾಗಿ ಹೇಳಿದ್ದಾಳೆ. ನಿಮ್ಮ ಸಂಸ್ಥೆಯ ಮುಂದೆ ಬಂದು ನೀವು ಸಂಸ್ಥೆಯ ಹಣ ದುರುಪಯೋಗ ಮಾಡಿ, ಮೋಸ ಮಾಡುತ್ತಿದ್ದೀರಿ ಎಂದು ಅಲ್ಲಿಗೆ ಬಂದು ಸುಳ್ಳು ಪತ್ರ ಬರೆದುಕೊಡುತ್ತೇನೆ. ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಮೊಬೈಲ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಳು.
ಉದ್ದೇಶ ಪೂರ್ವಕವಾಗಿ ಅವರೆಲ್ಲ ಸಂಘಟಿತರಾಗಿ ನನಗೆ ಬೆದರಿಸಿ ಹಣ ವಸೂಲಿ ಮಾಡಿಕೊಂಡಿದ್ದಾರೆ. ನಾಗರತ್ನಾ, ಹೇಮಂತ ಕರ್ಕೇರ, ಪ್ರಮೋದ ಹಾಗೂ ರೇಣುಕಾ ಎಂಬವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಂಚನೆಗೊಳಗಾದ ಪ್ರದೀಪ ದೂರು ನೀಡಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿತರ ಪತ್ತೆಗಾಗಿ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಭರತೇಶ ಕಂಕಣವಾಡಿ, ರತ್ನಾಕರ ಕೆ., ಸಿಬ್ಬಂದಿ ಪ್ರಸನ್ನ ಸಿ., ಜೀವನಕುಮಾರ, ಜಗನ್ನಾಥ ನಾಯ್ಕ, ಹೇಮಂತ, ಸವಿತಾ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.