ಉಡುಪಿಯ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟಕ್ಕೆ ಬಂದಿರುವ ನೇರಳೆ ಹಣ್ಣು.
Published on:
Copied
Follow Us
* ಚರ್ಚೆಗೆ ಗ್ರಾಸವಾದ ಜನಪದರ ನಂಬಿಕೆ
* ತಿಂಗಳಾದರೂ ಅಬ್ಬರಿಸದ ವರ್ಷಧಾರೆ
ಪ್ರಶಾಂತ ಭಾಗ್ವತ ಉಡುಪಿ
ವೈಜ್ಞಾನಿಕ ಜ್ಞಾನ ತಿಳಿದಿರದ ಪೂರ್ವಜರು ಅದೆಷ್ಟೋ ಬಗೆಯ ಜೀವನ ಜ್ಞಾನವನ್ನು ಪ್ರಕೃತಿ, ಪರಿಸರ, ಮರ, ಪ್ರಾಣಿ-ಪಕ್ಷಿಗಳ ಮೂಲಕ ತಿಳಿದುಕೊಳ್ಳುತ್ತಿದ್ದರು. ಸೂರ್ಯನ ಚಲನೆಯಿಂದ ನಿತ್ಯದ ಸಮಯ ಹಾಗೂ ನೇರಳೆ ಮರದಲ್ಲಿ ಹಣ್ಣಿನ ಫಸಲು ನೋಡಿ ಉತ್ತಮ ಮಳೆ-ಬರಗಾಲದ ದಿನ ಅರಿತುಕೊಳ್ಳುತ್ತಿದ್ದರು.
ನೇರಳೆ ಹಣ್ಣು ಹೆಚ್ಚು ಬಂದರೆ ಆ ವರ್ಷ ಬರಗಾಲ ಬರುತ್ತದೆ ಎನ್ನುವುದು ಜನಪದದ ಮೂಲದಿಂದ ಅಥವಾ ಹಿಂದಿನ ಹಿರಿಯರು ಅನುಸರಿಸಿಕೊಂಡು ಬಂದ ನಂಬಿಕೆ. ಕಾಕತಾಳೀಯ ಎಂಬಂತೆ ಪ್ರಸ್ತುತ ರಾಜ್ಯ ಹಾಗೂ ದೇಶದಲ್ಲಿ ಹೇರಳವಾಗಿ ನೇರಳೆ ಹಣ್ಣಿನ ಫಸಲು ಬಂದಿದ್ದು, ಮಳೆ ಕಡಿಮೆಯಾಗಿದೆ.
ಮರದಲ್ಲಿ ಹೆಚ್ಚಿದ ನೇರಳೆ ಹಣ್ಣಿನ ಗೊಂಚಲು.
ಕೈಕೊಟ್ಟ ಮುಂಗಾರು ಮಳೆ
ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೇರಳೆ ಹಣ್ಣು ಮಾರಾಟಕ್ಕೆ ಬಂದಿದ್ದು, ಇದು ಬರಗಾಲದ ಸೂಚನೆಯೇ ಎಂಬ ಚರ್ಚೆಯೂ ನಡೆದಿದೆ. ಎಲ್ನಿನೋ ಪರಿಣಾಮದಿಂದ ದೇಶದಲ್ಲಿ ನಿರೀಕ್ಷೆ ಹಾಗೂ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ. ಮಳೆಗಾಲ ಆರಂಭವಾಗಿ ಮೂರು ವಾರ ಕಳೆದರೂ ಒಂದು ದಿನವೂ ಉತ್ತಮವಾಗಿ ಸುರಿದಿಲ್ಲ. ಈಗಲೇ ಶೇ.30ರಷ್ಟು ಮಳೆ ಕೊರತೆಯಾಗಿದೆ.
ಮಾರುಕಟ್ಟೆಯಲ್ಲಿ ನೇರಳೆ ದರ್ಬಾರ್
ರಾಜ್ಯದ ಎಲ್ಲ ಮಾರುಕಟ್ಟೆ, ರಸ್ತೆ ಬದಿ ಹಾಗೂ ಬಸ್ ನಿಲ್ದಾಣಗಳಲ್ಲಿಯೂ ಸಹ ಭಾರಿ ಪ್ರಮಾಣದಲ್ಲಿ ನೇರಳೆ ಹಣ್ಣು ಮಾರಾಟವಾಗುತ್ತಿದೆ. ತಳ್ಳುವ ಗಾಡಿಯಲ್ಲೂ ಸಹ ವಾರ್ಡ್ ಹಾಗೂ ಜನವಸತಿಯ ಬೀದಿಗಳಲ್ಲಿ ಮಾರಾಟ ನಡೆದಿದೆ. ಹಣ್ಣುಗಳಿರುವ ಯಾವುದೇ ಅಂಗಡಿಗೆ ಹೋದರೂ ಅಲ್ಲಿ ನೇರಳೆ ಹಣ್ಣಿನ ಬುಟ್ಟಿ ಗಮನ ಸೆಳೆಯುತ್ತಿದೆ.
ಖಚಿತ ವೈಜ್ಞಾನಿಕ ಸಾಕ್ಷ್ಯಗಳಿಲ್ಲ
ಎಲ್ಲ ವಿಚಾರ, ಸಂಗತಿ ಹಾಗೂ ವಿವಿಧ ಕಾಮಗಾರಿಯನ್ನೂ ಸಹ ಇಂದು ವೈಜ್ಞಾನಿಕ ರೀತಿಯಲ್ಲೇ ನಿರ್ಧರಿಸಲಾಗುತ್ತಿದೆ. ಹೀಗಾಗಿ ಜನಪದದ ಮೂಲಕ್ಕೆ ಹೆಚ್ಚಿನ ಪ್ರಾಶಸ ಲಭಿಸುತ್ತಿಲ್ಲ. ಹಣ್ಣು ನೀಡುವ ಮರ ಅಪಾರ ಪ್ರಮಾಣದಲ್ಲಿ ಫಸಲು ನೀಡುವ ಪ್ರಕ್ರಿಯೆಯನ್ನು ವಿಜ್ಞಾನದಲ್ಲಿ 'ಸ್ಟ್ರೆಸ್ ಫ್ರೂಟಿಂಗ್' ಎನ್ನಲಾಗುತ್ತದೆ. ನೀರಿನ ಕೊರತೆ ಅಥವಾ ಪರಿಸರದ ಒತ್ತಡದ ಸೂಚನೆ ಇರುವಾಗ ಕೆಲವು ಮರಗಳು ತಮ್ಮ ಪ್ರಜಾತಿಯ ಉಳಿವಿಗಾಗಿ ಹೆಚ್ಚು ಪ್ರಮಾಣದಲ್ಲಿ ಹಣ್ಣು ಮತ್ತು ಬೀಜ ಉತ್ಪಾದಿಸುವ ಪ್ರವೃತ್ತಿ ತೋರಬಹುದು. ಆದರೆ, ನೇರಳೆ ಹಣ್ಣಿನ ಅಧಿಕ ಇಳುವರಿ ಬಂದರೆ ಬರಗಾಲ ಖಚಿತ ಎನ್ನುವುದಕ್ಕೆ ವೈಜ್ಞಾನಿಕವಾಗಿ ಸ್ಪಷ್ಟ ಸಾಕ್ಷ್ಯಗಳಿಲ್ಲ ಎನ್ನುತ್ತಾರೆ ತಜ್ಞರು.
"
ತಾಪಮಾನದ ಮಾದರಿ, ಮಣ್ಣಿನ ತೇವಾಂಶದ ಮಟ್ಟ, ವಾತಾವರಣದ ಆರ್ದ್ರತೆ, ಮಾನ್ಸೂನ್ ಪೂರ್ವ ಹವಾಮಾನಗಳು ಮಳೆ ಕೊರತೆಗೆ ಕಾರಣವಾಗಬಲ್ಲದು. ಹೀಗಾಗಿ ಭಾರಿ ಪ್ರಮಾಣದಲ್ಲಿ ನೇರಳೆ ಹಣ್ಣು ಬಂದಿರುವುದಕ್ಕೆ ಶುಷ್ಕ ಪರಿಸ್ಥಿತಿಗಳ ಸಂಭಾವ್ಯ ಪರಿಸರ ಸೂಚಕವೆನ್ನಬಹುದು. ಆದರೆ, ಇದು ಮಳೆಗಾಲದ ವೈಫಲ್ಯದ ವೈಜ್ಞಾನಿಕವಾಗಿ ವಿಶ್ವಾಸಾರ್ಹ ಮುನ್ಸೂಚಕವಲ್ಲ. ಮುಖ್ಯವಾಗಿ ನೀರಿನ ಒತ್ತಡ, ಹೆಚ್ಚಿದ ಸೂರ್ಯನ ಬೆಳಕು, ಕಡಿಮೆ ರೋಗ ಮತ್ತು ಒಣ ಪರಿಸ್ಥಿತಿಗಳಿಗೆ ಮರ ಹೊಂದಿಕೊಳ್ಳುವುದರಿಂದ ನೇರಳೆ ಹಣ್ಣಿನ ಉತ್ಪಾದನೆ ಹೇರಳವಾಗಿದೆ.
— ಡಾ. ಬಾಲಕೃಷ್ಣ ಎಸ್. ಮದ್ದೋಡಿ. ಭಾರತ ಸರ್ಕಾರದ ಪರಿಸರ ಮತ್ತು ಮೌಲ್ಯಮಾಪನ ಸಮಿತಿಯ ಸದಸ್ಯರು.
"
ನೇರಳೆ ಫಸಲು ಹೆಚ್ಚಿದರೆ ಮಳೆ ಕಡಿಮೆಯಾಗುತ್ತದೆ ಎಂದು ನಮ್ಮ ಅಜ್ಜ-ಅಜ್ಜಿ ಹೇಳುತ್ತಿದ್ದರು. ವಿಜ್ಞಾನ ಅಲ್ಲಗಳೆದರೂ ಹಿರಿಯರ ಮಾತಿನಂತೆ ನೇರಳೆ ಹಣ್ಣು ಈ ಬಾರಿ ಹೆಚ್ಚಿದ್ದು, ಇನ್ನೂ ಸರಿಯಾಗಿ ಮಳೆಯಾಗಿಲ್ಲ. ಶುಷ್ಕ ಪರಿಸ್ಥಿತಿಯ ಅರಿವು ನೇರಳೆಯಂತಹ ಬೃಹತ್ ಮರಗಳಿಗೂ ಆಗುತ್ತವೆ. ಅವು ಭೂಮಿಯ ಆಳಕ್ಕೆ ಬೇರನ್ನು ವ್ಯಾಪಿಸಿ ಸುತ್ತಮುತ್ತಲಿನ ತೇವಾಂಶವನ್ನೆಲ್ಲ ಹೀರಿಕೊಳ್ಳುತ್ತದೆ. ಅದರಿಂದಾಗಿ ಆ ಭಾಗದಲ್ಲಿನ ಬಾವಿ, ಹಳ್ಳ-ಕೊಳ್ಳಗಳ ಬತ್ತಿ ಹೋಗಿ ಬರಗಾಲ ಉಂಟಾಗುತ್ತವೆ.