ಪುತ್ತೂರು ಗ್ರಾಮಾಂತರ: ಏಳು ವರ್ಷದ ಹಿಂದೆ ಪತ್ನಿಯನ್ನು ಕೊಲೆಗೈದು 4 ವರ್ಷ ಜೈಲಿನಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆರೋಪಿ, ಪಾಣಾಜೆ ಗ್ರಾಮದ ಕಲ್ಲಪದವು ನಿವಾಸಿ ಗಣೇಶ್(37) ಬ್ಲೇಡಿನಿಂದ ಕುತ್ತಿಗೆ ಕೊಯ್ದುಕೊಂಡು ಬಳಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮರ ಕತ್ತರಿಸುವ ಕೆಲಸ ಮಾಡುತ್ತಿದ್ದ ಗಣೇಶ್ ಪಾಣಾಜೆ ಗ್ರಾಮದ ಕಲ್ಲಪದವಿನಲ್ಲಿ ಸಹೋದರನೊಂದಿಗೆ ವಾಸ್ತವ್ಯವಿದ್ದ. 10 ವರ್ಷದ ಹಿಂದೆ ನಿಡ್ಪಳ್ಳಿಯ ಅಕ್ಷತಾ ಎಂಬುವರನ್ನು ವಿವಾಹವಾಗಿದ್ದ ಗಣೇಶ್ 2019ರ ಜುಲೈ 18ರಂದು ರಾತ್ರಿ ಪತ್ನಿಯೊಂದಿಗೆ ಜಗಳ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. 4 ವರ್ಷಗಳ ಕಾಲ ಜೈಲಿನಲ್ಲಿದ್ದು, ಜಮೀನಿನ ಮೇಲೆ ಬಿಡುಗಡೆಗೊಂಡಿದ್ದನು. 4 ತಿಂಗಳ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗಣೇಶ್‌ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಶನಿವಾರ ಗಣೇಶ್ ಬ್ಲೇಡಿನಿಂದ ತನ್ನ ಕುತ್ತಿಗೆಗೆ ಗೀರಿಕೊಂಡಿದ್ದ. ಇದನ್ನು ನೋಡಿದ ಸಹೋದರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದ ವೇಳೆ ಗಣೇಶ್ ಮನೆಯಿಂದ ಹೊರಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದನು. ಮನೆಯವರು ಹುಡುಕಾಡಿದಾಗ ಮನೆ ಸಮೀಪದ ಬಾವಿ ಬಳಿ ಗಣೇಶ್ ಬಳಸುತ್ತಿದ್ದ ಮೊಬೈಲ್ ಮತ್ತು ಚಪ್ಪಲಿ ಕಂಡು ಬಂದಿತ್ತು. ಅಗ್ನಿಶಾಮಕ ದಳದವರು ಶೋಧ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಸಹೋದರ ದೂರಿನಲ್ಲಿ ತಿಳಿಸಿದ್ದಾರೆ. ಸಂಪ್ಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.