ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆ

ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆ
ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆ
Published on
ಕಡಬ (ದ.ಕ.): ಆಲಂಕಾರು ಪೇಟೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಬಜಗೋಳಿ ಮೂಲದ ದಿನೇಶ್ ಪೂಜಾರಿ (45) ತಮ್ಮ ಪತ್ನಿ ಸಂಗೀತಾ (39) ಎಂಬುವವರನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿ ಬಳಿಕ ಬಳಿಕ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
 ಕಡಬ ತಾಲೂಕು ಆಲಂಕಾರು ಗ್ರಾಮದ ಕಜೆ ಎಂಬಲ್ಲಿ ಶನಿವಾರ ಘಟನೆ ನಡೆದಿದ್ದು, ದಂಪತಿಯ ಎರಡು ವರ್ಷದ ಹೆಣ್ಣು ಮಗು ಧೃವಿ ಅನಾಥವಾಗಿದೆ. 
 ದಿನೇಶ್ ಕಳೆದ ವರ್ಷದಿಂದ ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಪತ್ನಿ, ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವಿಪರೀತ ಕುಡಿತದ ಚಟವಿದ್ದ ದಿನೇಶ್ ಕಳೆದ ಒಂದೂವರೆ ತಿಂಗಳಿನಿಂದ ಹೋಟೆಲ್ ಬಂದ್ ಮಾಡಿದ್ದರು. ಪತಿಯ ಕುಡಿತದ ಚಟ ಬಿಡಿಸುವ ಉದ್ದೇಶದಿಂದ ಪತ್ನಿ ಸಂಗೀತಾ ತವರು ಮನೆಗೆ ಕರೆದುಕೊಂಡು ಬಂದು ಔಷಧ ಮಾಡಿದ್ದರು. 
17 ದಿನಗಳ ಕಾಲ ಪತ್ನಿಯ ತವರು ಮನೆಯಲ್ಲೇ ಇದ್ದ ದಂಪತಿ ಶುಕ್ರವಾರವಷ್ಟೇ ಆಲಂಕಾರಿನ ತಮ್ಮಬಾಡಿಗೆ ಮನೆಗೆ ವಾಪಸ್ ಬಂದಿದ್ದರು. ಶನಿವಾರ ಬೆಳಿಗ್ಗೆಯಿಂದ ಅನೇಕ ಸಲ ಸಂಗೀತಾ ಅವರ ಮೊಬೈಲ್‌ಗೆ ತಾಯಿ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಸಂಶಯಗೊಂಡ ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. 
ನೆರೆಮನೆಯವರು ಬಂದು ಕರೆದರೂ, ಸ್ಪಂದನೆ ಬರಲಿಲ್ಲ. ಕಿಟಕಿ ಬಾಗಿಲುಗಳನ್ನು ಮುಚ್ಚಲಾಗಿದ್ದು ಮಗು ಅಳುತ್ತಿರುವ ಸದ್ದು ಮಾತ್ರವೇ ಕೇಳಿಸುತ್ತಿತ್ತು. ತಕ್ಷಣ ಮನೆ ಮಾಲೀಕರಿಗೆ ವಿಚಾರ ತಿಳಿಸಿ ಕಡಬ ಪೊಲೀಸರ ಮೂಲಕ ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
 ಸಂಗೀತಾಳ ಸಹೋದರಿ ಸುಮಲತಾ ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭೂಮ ರೆಡ್ಡಿ, ಡಿವೈಎಸ್ಪಿ ರೋಹಿಣಿ ಸಿ.ಆರ್, ಉಪ್ಪಿನಂಡಿ ಸರ್ಕಲ್ ಇನ್‌ಸ್ಪೆಪೆಕ್ಟರ್ ನಾಗರಾಜ್, ಕಡಬ ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net