ಬುರುಡೆ ಗ್ಯಾಂಗ್​ ರಕ್ಷಣೆಗೆ ಎಎಸ್ಎಫ್​ ನೇಮಕ

ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅನುಪಮಾ ಶೆಣೈ ಮಾತನಾಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅನುಪಮಾ ಶೆಣೈ ಮಾತನಾಡಿದರು.
Published on

* ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪ 

* ವಿಶೇಷ ಕಾರ್ಯ ಪಡೆಗೆ ಕಾನೂನಿನಲ್ಲಿದೆಯೇ ಮಾನ್ಯತೆ?

ಉಡುಪಿ: ಕರ್ನಾಟಕದಲ್ಲಿ ನಕ್ಸಲ್​ ನಿಗ್ರಹವಾಗಿದೆ ಎಂದು ಎಎನ್​ಎಫ್​ (ನಕ್ಸಲ್​ ನಿಗ್ರಹ ಪಡೆ) ಸಿಬ್ಬಂದಿ ಮೊಟಕುಗೊಳಿಸಿ ಕಳೆದ ವರ್ಷ ಜೂನ್​ ತಿಂಗಳಲ್ಲಿ ದಕ ಜಿಲ್ಲೆ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗೆ ಮಾತ್ರ ಅನ್ವಯಿಸಿ ರಾಜ್ಯ ಕಾಂಗ್ರೆಸ್​ ಸರ್ಕಾರವು ಎಎಸ್ಎಫ್​ (ವಿಶೇಷ ಕಾರ್ಯ ಪಡೆ) ನೇಮಕ ಮಾಡಿತ್ತು. ಈ ಕಾರ್ಯಪಡೆಗೆ ಕಾನೂನಿನಲ್ಲಿ ಯಾವ ಮಾನ್ಯತೆ ಇದೆಯೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ರಾಜ್ಯದ ಜನರಿಗೆ ಉತ್ತರಿಸಬೇಕು ಎಂದು ಭಾರತೀಯ ಜನಶಕ್ತಿ ಕಾಂಗ್ರೆಸ್​ (ರಿ.)ನ ಅಧ್ಯೆ, ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆಗ್ರಹಿಸಿದರು. 
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಜು.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುರುಡೆ ಗ್ಯಾಂಗ್​ನ ನಕಲಿ ಕಾರ್ಯಾಚರಣೆಗೆ ಹಾಗೂ ಅವರ ರಕ್ಷಣೆಗೆ ಸಹಕಾರಿಯಾಗಿ ರಾಜ್ಯ ಕಾಂಗ್ರೆಸ್​ ಸರ್ಕಾರವು ಎಎಸ್ಎಫ್​ ಆರಂಭಿಸಿದೆ ಎಂದು ಆರೋಪಿಸಿದರು.
ಕರಾವಳಿಗೇಕೆ ಕಾರ್ಯಪಡೆ? 
ಈ ಹಿಂದೆ ಡಿಕೆಶಿ ಉಪಮುಖ್ಯಮಂತ್ರಿ ಆಗಿದ್ದಾಗ ಕರಾವಳಿ ಜನರು ಕಾಂಗ್ರೆಸ್​ಗೆ ಮತ ಹಾಕುವುದಿಲ್ಲ. ಹೀಗಾಗಿ ಕರಾವಳಿ ಭಾಗಕ್ಕೆ ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳು ಏಕೆ ಬೇಕು ಎಂದು ಕೇಳಿದ್ದರು. ಈಗ ಅವರೇ ಸಿಎಂ ಆಗಿದ್ದಾರೆ. ಹಾಗಾದರೆ ಕರಾವಳಿ ಭಾಗಕ್ಕೆ ಎಎಸ್ಎಫ್ ಯಾಕೆ ಬೇಕು? ಕೋಮು ಗಲಭೆ ನಿಯಂತ್ರಣಕ್ಕೆ ಎಂದು ಹೇಳುತ್ತಾರೆ. ಈ ಕೆಲಸ ಪೊಲೀಸ್​ ಇಲಾಖೆಯದ್ದಲ್ಲವೇ? ಈ ಕಾರ್ಯಪಡೆ ಆರಂಭವಾದ ಕೇವಲ 20 ದಿನದ ಬಳಿಕ ಚಿನ್ನಯ್ಯ ಬುರುಡೆ ಹಿಡಿದುಕೊಂಡು ಬಂದಿದ್ದಾನೆ. ಬುರುಡೆ ಗ್ಯಾಂಗ್​ ರಕ್ಷಣೆಗೇ ಈ ಪಡೆ ನೇಮಕ ಮಾಡಿದ್ದು. ಆದರೆ, ಚಿನ್ನಯ್ಯ ಲಗಾಟೆ ಹೊಡೆದ ಬಳಿಕ ಬುರುಡೆ ಗ್ಯಾಂಗ್​ನ ಕತೆ ಮುಗಿದಿದೆ. ಆದರೆ, ಕರಾವಳಿಯಲ್ಲಿ ಈಗಲೂ ಏಕೆ ವಿಶೇಷ ಕಾರ್ಯಪಡೆ ಇದೆ ಎಂದು ಅನುಪಮಾ ಪ್ರಶ್ನಿಸಿದರು.

ಕಾರ್ಯಾಚರಣೆಯ ವರದಿ ಒಪ್ಪಿಸಿ

ಅನುಪಮಾ ಶೆಣೈ
ಎಎಸ್ಎಫ್​ ತಂಡ ರಚನೆಯಾಗಿ ವರ್ಷ ಕಳೆದಿದೆ. ಸುಧೀರ್​ಕುಮಾರ್​ ಎ.ಡಿ. ಅವರು ಇದರ ಮುಖ್ಯಸ್ಥರಾಗಿದ್ದಾರೆ. ಇನ್ನೂ ಸಹ ಈ ಪಡೆ ಯಾವೆಲ್ಲ ಕಾರ್ಯಾಚರಣೆ ಮಾಡಿದೆ ಎಂದು ವರದಿ ಒಪ್ಪಿಸಿಲ್ಲ. ಈ ಕುರಿತು ನಾನು 8 ತಿಂಗಳ ಹಿಂದೆ ಆರ್​ಟಿಐ ಮೂಲಕ ಮಾಹಿತಿ ಕೇಳಿದ್ದೆ. ಆದರೆ. ಕಳೆದ ಜು.1ರಂದು ನಿಮ್ಮ ಅರ್ಜಿಯನ್ನು ಹಣಕಾಸು ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪತ್ರ ರವಾನಿಸಿದ್ದಾರೆ. ಸರ್ಕಾರಕ್ಕೆ ಈ ಕಾರ್ಯಪಡೆ ತನ್ನ ಸಾಧನೆ ವಿವರ ಸಲ್ಲಿಸಬೇಕು. ಅಥವಾ ಬುರುಡೆ ಗ್ಯಾಂಗ್​ನ ರಕ್ಷಣೆಗಾಗಿಯೇ ಇದ್ದನ್ನು ಆರಂಭಿಸಿದ್ದಾಗಿತ್ತು ಎಂದು ಸರ್ಕಾರ ಒಪ್ಪಿಕೊಳ್ಳಬೇಕು. ಸಿಎಂ ಡಿಕೆಶಿ ಅವರು ಎಎಸ್ಎಫ್​ ಎಂಬ ಬಿಳಿಯಾನೆ ಸಾಕುವುದನ್ನು ಬಿಟ್ಟು, ಅದಕ್ಕೆ ವಿನಯೋಗಿಸುವ ಹಣವನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕು ಎಂದು ಅನುಪಮಾ ಶೆಣೈ ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net