ಕುಂದಾಪುರ: ಪ್ರವಾಸಿ ತಾಣವಾದ ತಾಲೂಕಿನ ಕೋಡಿ ಸಮೀಪದ ಸೀ ವಾಕ್ ಪ್ರದೇಶದಲ್ಲಿ ಕಡಲ ಅಬ್ಬರ ಹೆಚ್ಚಿದೆ.
ಬೃಹದಾಕಾರದ ಅಲೆಗಳು ಸೀ ವಾಕ್ ಹಾದಿಯೊಳಕ್ಕೂ ವ್ಯಾಪಿಸುತ್ತಿದ್ದು, ಪ್ರವಾಸಿಗರು ಅತ್ಯಂತ ಜಾಗರೂಕತೆ ವಹಿಸುವ ಅಗತ್ಯವಿದೆ. ಇಲ್ಲಿಗೆ ಅಳವಡಿಸಿದ ಟೆಟ್ರಾಪೋಡ್‌ಗಳಿಗೆ ದೊಡ್ಡ ಗಾತ್ರದ ಅಲೆಗಳು ಹೊಡೆಯುವ ದೃಶ್ಯ ಕಂಡುಬಂದಿದೆ.
ವಾರಾಂತ್ಯ ಹಾಗೂ ರಜೆಗಳ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ಸೇರುತ್ತಾರೆ. ಮಳೆಯಿಲ್ಲದಿದ್ದರೆ ನಿತ್ಯ ಸಂಜೆ ಸೂರ್ಯಾಸ್ತದ ವೇಳೆ ನೂರಾರು ಮಂದಿ ಸೀ ವಾಕ್ ಪ್ರದೇಶದತ್ತ ಸೂರ್ಯಾಸ್ತ ವೀಕ್ಷಣೆ ಹಾಗೂ ವಾಕಿಂಗ್‌ಗೆ ಬರುತ್ತಾರೆ. ಆದರೆ ಹೊರ ಜಿಲ್ಲೆ ಹಾಗೂ ಇತರ ಪ್ರದೇಶಗಳಿಂದ ಬರುವ ಮಂದಿಗೆ ಅಲೆಗಳ ರಭಸ ತಿಳಿದಿರುವುದಿಲ್ಲ.
ಫೋಟೋ ಹಾಗೂ ಸೆಲ್ಫಿಗಾಗಿ ಇಲ್ಲಿ ನಿಲ್ಲುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಹಾಗೆಯೇ ಟೆಟ್ರಾಪೋಡ್‌ಗಳು ಮಳೆಯ ಪಾಚಿಗೆ ಜಾರುತ್ತಿದ್ದು ಸೀ ವಾಕ್ ಅಂತ್ಯದ ತಡೆಗೋಡೆಯ ಎರಡು ಬದಿಗಳು ಬಿರುಕುಬಿಟ್ಟಿವೆ. ಸಂಬಂದಪಟ್ಟವರು ಅಗತ್ಯ ಕ್ರಮವಹಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.