

ಉಡುಪಿ: ತೆಂಕನಿಡಿಯೂರು ಪಂಚಾಯಿತಿ ವ್ಯಾಪ್ತಿಯ 3ನೇ ವಾರ್ಡ್ ರಸ್ತೆಯಲ್ಲಿ ಚರಂಡಿ ಮುಚ್ಚಿಹೋಗಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, 25ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗುತ್ತಿದೆ.
ಪ್ಯಾಲೇಸ್ ಬಾರ್ನಿಂದ ದಕ್ಷಿಣಕ್ಕೆ ರವಿರಾಜ್ ಹೆಗ್ಡೆ ಮನೆವರೆಗೆ ಸುಮಾರು 500 ಮೀಟರ್ವರೆಗೆ ಚರಂಡಿ ಮಣ್ಣಿನಿಂದ ಮುಚ್ಚಿಹೋಗಿದ್ದು, ಮಳೆಗಾಲದಲ್ಲಿ ಪೂರ್ವಭಾಗದಿಂದ ಹರಿದು ಬರುವ ನೀರು ರಸ್ತೆ ಮೇಲೆ ಶೇಖರಣೆಯಾಗುತ್ತಿದೆ. ಇದರಿಂದ ರಸ್ತೆಯ ಪಶ್ಚಿಮ ಭಾಗದಲ್ಲಿರುವ ಮನೆ, ಅಂಗಡಿ, ಕೃಷಿಭೂಮಿ ಜಲಾವೃತವಾಗುತ್ತಿದೆ.
ಕೊಡವೂರು ದೇವಸ್ಥಾನದ ವೃತ್ತದಿಂದ ತೆಂಕನಿಡಿಯೂರು ಕಾಲೇಜು ಹಾಗೂ ಸಂತೆಕಟ್ಟೆಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯಿತಿ ಮುಖ್ಯ ರಸ್ತೆಯಲ್ಲಿ ಅಕ್ಕಪಕ್ಕದ ಚರಂಡಿ ಸೂಕ್ತ ನಿರ್ವಹಣೆ ಇಲ್ಲದೆ ಹೂಳುತುಂಬಿ ಮುಚ್ಚಿಹೋಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಶೇಖರಣೆಗೊಂಡು ವಾಹನ ಸವಾರರಿಗೂ ಸಮಸ್ಯೆಯಾಗುತ್ತಿದೆ. ಜೋರು ಮಳೆ ಬಂದರೆ ಪಕ್ಕದಲ್ಲಿರುವ ಮನೆಗಳ ಅಂಗಳಕ್ಕೆ ನೀರು ನುಗ್ಗುತ್ತಿದೆ. ತೆಂಗಿನ ಮರಗಳ ಬುಡದಲ್ಲಿ ನೀರು ನಿಂತು ತೆಂಗಿನ ಗಿಡಗಳು ಕೊಳೆಯುವ ಭೀತಿ ಎದುರಾಗಿದೆ. ಅಲ್ಲದೆ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಗರಡಿಮಜಲು ಶಾಖೆ ಮುಂಭಾಗದಲ್ಲೂ ನೀರು ನಿಲ್ಲುತ್ತಿದ್ದು, ಸೊಸೈಟಿಗೆ ಹಾಗೂ ಪಡಿತರ ತರಲು ಬರುವ ಗ್ರಾಹಕರು ಕೆಸರಿನಲ್ಲೇ ಓಡಾಡಬೇಕಾದ ದುಸ್ಥಿತಿ ನಿಮಾರ್ಣವಾಗಿದೆ.
ಈ ಬಗ್ಗೆ ಸ್ಥಳಿಯರು ಅನೇಕ ಬಾರಿ ಗ್ರಾಪಂಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಪಂಚಾಯಿತಿಯವರು ಅನುದಾನವಿಲ್ಲ ಎಂಬ ನೆಪ ಹೇಳಿ ಜಿಲ್ಲಾ ಪಂಚಾಯಿತಿ ಅಥವಾ ಪಿಡಬ್ಲ್ಯೂಡಿಗೆ ಜವಾಬ್ದಾರಿ ತಳ್ಳುತ್ತಿದ್ದಾರೆ. ಯಾವುದೇ ದೊಡ್ಡ ಅನುದಾನದ ಅಗತ್ಯವಿಲ್ಲ. ಕೇವಲ ಇಬ್ಬರು ಕಾರ್ಮಿಕರನ್ನು ಬಳಸಿ ಚರಂಡಿ ನಿರ್ಮಿಸಿದರೆ ಸಮಸ್ಯೆಗೆ ತಕ್ಷಣ ಪರಿಹಾರ ಸಿಗುತ್ತದೆ ಎಂದು ಸ್ಥಳಿಯರ ಅಭಿಪ್ರಾಯ.