ಜುಲೈ 10ರೊಳಗೆ ನೀರಿನ ಸಂಪರ್ಕ ಪೂರ್ಣ

  ಉಳ್ಳಾಲದ ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಭಿಯಂತೆ ಶೋಭಾಲಕ್ಷ್ಮೀ ಮಾಹಿತಿ ನೀಡಿದರು. ಪುರಸಭೆ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಮತ್ತು ಮುಖ್ಯಾಧಿಕಾರಿ ಮತ್ತಡಿ ಉಪಸ್ಥಿತರಿದ್ದರು.
ಉಳ್ಳಾಲದ ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಭಿಯಂತೆ ಶೋಭಾಲಕ್ಷ್ಮೀ ಮಾಹಿತಿ ನೀಡಿದರು. ಪುರಸಭೆ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಮತ್ತು ಮುಖ್ಯಾಧಿಕಾರಿ ಮತ್ತಡಿ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆ ಮಂಗಳವಾರ ನಡೆದಿದ್ದು, ಅಮೃತ ನಗರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವಿಳಂಬ ಮತ್ತು ಗುಣಮಟ್ಟದ ಕುರಿತು ಸದಸ್ಯರು ಮತ್ತು ಅಧಿಕಾರಿಗಳ ನಡುವೆ ತೀವ್ರ ಚರ್ಚೆ ನಡೆಯಿತು.
ಅಮೃತ ನಗರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯು ಅಂತಿಮ ಹಂತದಲ್ಲಿದ್ದರೂ, ಹಲವು ಕಡೆಗಳಲ್ಲಿ ಮನೆ ಸಂಪರ್ಕ ಬಾಕಿ ಉಳಿದಿದೆ. ಈ ಬಗ್ಗೆ ಕೆಯುಡಬ್ಲ್ಯೂಎಸ್ ಅಭಿಯಂತೆ ಶೋಭಾಲಕ್ಷ್ಮೀ ಮಾತನಾಡಿ, ಬಗಂಬಿಲದಲ್ಲಿ ಎರಡು ಟ್ಯಾಂಕ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇನ್ನೂ 250ರಿಂದ 300 ಮನೆಗಳಿಗೆ ಸಂಪರ್ಕ ನೀಡಬೇಕಿದೆ. ಜುಲೈ 10ರೊಳಗೆ ವಲಯ ಒಂದರಲ್ಲಿ ಮನೆ ಸಂಪರ್ಕ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಉಪಾಧ್ಯಕ್ಷ ರವಿಶಂಕರ್ ಪೈಪ್‌ಲೈನ್ ಅಳವಡಿಕೆಯ ಆಳ ಮತ್ತು ಗುಣಮಟ್ಟದ ಬಗ್ಗೆ ಪ್ರಶ್ನಿಸಿದರು. ಕಾಂಗ್ರೆಸ್ ಸದಸ್ಯ ಪುರುಷೋತ್ತಮ ಶೆಟ್ಟಿ ಪಿಲಾರ್, ತಮ್ಮ ವಾರ್ಡ್‌ನಲ್ಲಿ ಪೈಪ್ ಲೀಕೇಜ್ ಮತ್ತು ಇಂಟರ್‌ಲಾಕ್ ತೆರವುಗೊಳಿಸಿದ ನಂತರ ಮರುನಿರ್ಮಾಣ ಮಾಡದಿರುವ ಬಗ್ಗೆ ಅಳಲು ತೋಡಿಕೊಂಡರು. ವಾಲ್ ಚೇಂಬರ್‌ಗಳನ್ನು ನಿರ್ಮಿಸುವಾಗ ಚರಂಡಿ ನೀರು ಸೇರದಂತೆ ಎಚ್ಚರಿಕೆ ವಹಿಸುವಂತೆ ಬಿಜೆಪಿ ಸದಸ್ಯ ಹರೀಶ್ ಕುಂಪಲ ಒತ್ತಾಯಿಸಿದರು. ಮುಖ್ಯಾಧಿಕಾರಿ ಮತ್ತಡಿ ಮಾತನಾಡಿ, ಕಾಮಗಾರಿ ಪೂರ್ಣಗೊಂಡ ನಂತರವೇ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಆರೋಗ್ಯ ಮಾಹಿತಿ

ಕೋಟೆಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸವಿತಾ ಅವರು ಪುರಸಭೆ ವ್ಯಾಪ್ತಿಯಲ್ಲಿರುವ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಅಂಕಿಅಂಶಗಳನ್ನು ಮಂಡಿಸಿದರು. ಇದರಲ್ಲಿ ಬಿ.ಪಿ (808) ಮತ್ತು ಮಧುಮೇಹ (590) ರೋಗಿಗಳ ಸಂಖ್ಯೆ ಹೆಚ್ಚಿರುವುದು ಗಮನ ಸೆಳೆಯಿತು.

ರೆಸಾರ್ಟ್ ಪರಿಶೀಲಿಸಿ

ಉಚ್ಚಿಲ ಬೀಚ್‌ನಲ್ಲಿ ವಸತಿ ಮನೆಗಳೆಂದು ನೋಂದಾಯಿಸಿಕೊಂಡು ಬಳಿಕ ರೆಸಾರ್ಟ್, ಹೋಂಸ್ಟೇಗಳಾಗಿ ಪರಿವರ್ತನೆಯಾಗಿರುವ ಕಟ್ಟಡಗಳ ಬಗ್ಗೆ ಸರ್ವೇ ನಡೆಸಬೇಕೆಂದು ಉಪಾಧ್ಯಕ್ಷ ರವಿಶಂಕರ್ ಒತ್ತಾಯಿಸಿದರು. ಪುರಸಭೆ ಅಧ್ಯಕ್ಷೆ ಕಮಲ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.

ಸಿಸಿ ಕ್ಯಾಮರಾ ವೈಫಲ್ಯ - ಉಪಯೋಗಕ್ಕೆ ಬಾರದ ಸಿಸಿ ಕ್ಯಾಮರಾ!

ಸಿಸಿ ಕ್ಯಾಮರಾದ ಅಡಿಯಲ್ಲೇ ತ್ಯಾಜ್ಯ ಹಾಕಲಾಗುತ್ತದೆ. ಆದರೆ ಕ್ಯಾಮರಾದಲ್ಲಿ ಮುಖ ಕಾಣುವುದಿಲ್ಲ ಎಂದು ಅಧಿಕಾರಿ ಹೇಳುವುದಾದರೆ ಸಿಸಿ ಕ್ಯಾಮರಾದ ಅವಶ್ಯಕತೆಯೇನು ಎಂದು ಬಿಜೆಪಿ ಸದಸ್ಯೆ ಸಪ್ನಾ ಪ್ರಶ್ನಿಸಿದರು. ಸಿಸಿ ಕ್ಯಾಮರಾ ನಿಷ್ಪ್ರಯೋಜಕ ಎಂದು ಪುರುಷೋತ್ತಮ ಶೆಟ್ಟಿ ಧ್ವನಿಗೂಡಿಸಿದರು. ಒಂದು ದಿನ ಮಾತ್ರ ಸ್ಟೋರೇಜ್ ಆಗುವ ಕ್ಯಾಮರಾ ಬೇಕಾಗಿಲ್ಲ ಎಂದು ಹರೀಶ್, ಜಯ ಪೂಜಾರಿ ಪ್ರತಿಪಾದಿಸಿದರು. ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಸಿಸಿ ಕ್ಯಾಮರಾ ಫೂಟೇಜ್‌ಗಳನ್ನು ಸಂಬಂಧಪಟ್ಟ ವಾರ್ಡ್ ಕೌನ್ಸಿಲರ್‌ಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ

2021-22ನೇ ಸಾಲಿನಲ್ಲಿ ಮಂಜೂರಾದ 71 ಮನೆಗಳಲ್ಲಿ 4 ಮನೆಗಳ ಕಾಮಗಾರಿ ಇನ್ನೂ ಬಾಕಿಯಿದೆ. ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳದಿದ್ದರೆ ಬಂದಿರುವ ಅನುದಾನವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ ಎಂದು ಮುಖ್ಯಾಧಿಕಾರಿ ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net