ಪುರಸಭೆಯಿಂದಲೇ ನದಿಗೆ ತ್ಯಾಜ್ಯ!

ನದಿ ದಡದಲ್ಲಿ ಅಗ್ನಿದುರಂತದ ಲೋಡ್‌ಗಟ್ಟಲೇ ತ್ಯಾಜ್ಯ ಸುರಿದಿರುವುದು.
ನದಿ ದಡದಲ್ಲಿ ಅಗ್ನಿದುರಂತದ ಲೋಡ್‌ಗಟ್ಟಲೇ ತ್ಯಾಜ್ಯ ಸುರಿದಿರುವುದು.
Published on
ರಾಘವೇಂದ್ರ ಪೈ ಕುಂದಾಪುರ
ನದಿಗಳನ್ನು ಪಾಪನಾಶಿನಿ ಎನ್ನುತ್ತಾರೆ. ಆದರೆ ಇಲ್ಲಿ ಎಲ್ಲ ಪಾಪಗಳನ್ನೂ ನದಿಗೇ ತಂದು ಹಾಕಲಾಗುತ್ತಿದೆ. ಇಲ್ಲಿನ ಪಂಚನದಿಗಳು ಒಂದುಗೂಡುವ ಪಂಚ ಗಂಗಾವಳಿ ನದಿಗೆ ಕುಂದಾಪುರ ಪುರಸಭೆಯೇ ತ್ಯಾಜ್ಯ ಸುರಿದು ಮಲಿನಗೊಳಿಸುತ್ತಿದೆ. ಸ್ವಚ್ಛತೆಗೆ ಪ್ರಶಸ್ತಿ ಪಡೆದ ಪುರಸಭೆಯನ್ನೇ ಇದು ಅಣಕಿಸುವಂತಿದೆ. ಸೋಮವಾರ ನಗರದಲ್ಲಿ ಸಂಭವಿಸಿದ ಅಗ್ನಿದುರಂತದ 11 ಲೋಡು ತ್ಯಾಜ್ಯವನ್ನು ನದಿ ಬದಿಗೆ ಡಂಪ್ ಮಾಡಿದ್ದು, ಬೇಲಿ ಎದ್ದು ಹೊಲ ಮೇಯ್ದರೆ ಕೇಳುವವರು ಯಾರು ಎಂಬಂತಾಗಿದೆ ಪುರಸಭೆಯ ಈ ನಡೆ.

ಅತಿಕ್ರಮಣ

ಕಸದ ರಾಶಿಯನ್ನು ಹಾಕುತ್ತ ನದಿಯನ್ನು ನಿಧಾನಕ್ಕೆ ಅತಿಕ್ರಮಿಸಲಾಗುತ್ತಿದೆ. ನದಿಪಾತ್ರದ ಪಂಚಗಂಗಾವಳಿ ಉದ್ಯಾನವನ ಎದುರು ಲೋಡುಗಟ್ಟಲೆ ತ್ಯಾಜ್ಯ ಆವರಿಸಿಕೊಂಡಿದೆ. ಪುರಸಭೆ ಮನೆ ಮನೆಗಳಿಂದ, ವಾಣಿಜ್ಯ ಮಳಿಗೆಗಳಿಂದ ಸಂಗ್ರಹಿಸಿ ಇಲ್ಲಿಗೆ ತಂದು ಹಾಕುತ್ತದೆ. ಇಲ್ಲಿಂದ ಕಂದಾವರದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿದರೂ ಅಪಾರ ತ್ಯಾಜ್ಯ ಇಲ್ಲಿಯೇ ಉಳಿಯುತ್ತಿದೆ. ಈ ಜಾಗಕ್ಕೆ ಹೊಂದಿಕೊಂಡಿರುವ ಮದ್ದುಗುಡ್ಡೆ, ರಿಂಗ್ ರೋಡ್ ವ್ಯಾಪ್ತಿಯಲ್ಲಿ ನಿರಂತರ ತ್ಯಾಜ್ಯವನ್ನು ಪುರಸಭೆಯ ಕಸ ವಿಲೇವಾರಿ ವಾಹನಗಳು ಡಂಪ್ ಮಾಡುತ್ತಿವೆ.
ಕೊಳಚೆ ನೀರೂ ನದಿ ಸೇರುತ್ತಿದೆ: ಪಂಚ ಗಂಗಾವಳಿಯ ಹಿನ್ನೀರು ಮನಮೋಹಕವಾಗಿದ್ದು ಟೂರಿಸ್ಟ್‌ಗಳ ನೆಚ್ಚಿನ ತಾಣ. ಸದ್ಯ ಇಲ್ಲಿನ ನೋಟ ಅಸಹನೀಯವಾಗಿದೆ. ಯುಜಿಡಿ (ಸಮಗ್ರ ಒಳಚರಂಡಿ) ಯೋಜನೆ ಅಪೂರ್ಣದಿಂದ ನಗರದ 23 ವಾರ್ಡ್‌ಗಳ ತ್ಯಾಜ್ಯ ನೀರು ಗುಪ್ತ ಪೈಪ್‌ಗಳ ಮೂಲಕ ನದಿಗೆ ಬಿಡಲಾಗುತ್ತಿದೆ. ಉದ್ಯಾನವನ ಪಕ್ಕದಲ್ಲೇ ದೊಡ್ಡ ಗಾತ್ರದ ಪೈಪ್‌ನಿಂದ ದಿನದ 24 ಗಂಟೆಯೂ ಕೊಳಚೆ ನೀರು ನದಿ ಸೇರುತ್ತಿದೆ. ಇದು ರಿಂಗ್ ರೋಡ್‌ನಲ್ಲೂ ಅಲ್ಲಲ್ಲಿ ಕಾಣಸಿಗುತ್ತದೆ. ನದಿ ಪಾತ್ರದ ಕಾಂಡ್ಲವನದ ಬುಡಗಳೆಲ್ಲವೂ ಪ್ಲಾಸ್ಟಿಕ್ ಇನ್ನಿತರ ಮಾಲಿನ್ಯಕಾರಕ ವಸ್ತುಗಳಿಂದ ತುಂಬಿ ತುಳುಕುತ್ತಿದೆ.

ಮೀನುಗಾರಿಕೆ ನೆಲೆ ಅಸಹನೀಯ

ನದಿಯಲ್ಲಿ ಚಿಪ್ಪು ತೆಗೆಯುವುದು ಸೇರಿದಂತೆ ಮೀನುಗಾರಿಕೆ ನಡೆಸಲಾಗುತ್ತದೆ. ಮೀನಿಗೆ ಬೀಸಿದ ಬಲೆಗೆ ತ್ಯಾಜ್ಯವೇ ಸಿಕ್ಕಿಹಾಕಿಕೊಳ್ಳುತ್ತಿದೆ. ನದಿ ತುಂಬಾ ಹರಡಿಕೊಂಡಿರುವ ಕೊಳಚೆಯಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮೀನುಗಾರರು ಹೇಳುತ್ತಾರೆ. ತ್ಯಾಜ್ಯ ಎಸೆದು ಮಣ್ಣು ತುಂಬಿಸುವ ಪ್ರಕ್ರಿಯೆಯಿಂದಾಗಿ ನದಿಯ ಗಾತ್ರ ದಿನೇದಿನೇ ಕಿರಿದಾಗುತ್ತಿದೆ. ನದಿಪಾತ್ರದ ಜನರು, ಪ್ರವಾಸಿಗರು, ಮೀನುಗಾರರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪರಿಸರ ಕಾರ್ಯಕರ್ತ ದಿನೇಶ್ ಸಾರಂಗ, ಪ್ರವಾಸಿ ದೋಣಿ ನಡೆಸುವ ಸಂತೋಷ್ ಖಾರ್ವಿ ಹೇಳುತ್ತಾರೆ.

ಪುರಸಭೆಯ ಎಲ್ಲ ಕೊಳಚೆಗಳು ಕೊಳವೆಗಳ ಮೂಲಕ ಪಂಚಗಂಗಾವಳಿ ನದಿ ತಟವನ್ನು ಸೇರುವುದು ಒಂದಾದರೇ, ಪುರಸಭೆಯೇ ವಾರ್ಡ್‌ಗಳಿಂದ ಸಂಗ್ರಹಿಸಿದ ಕಸವನ್ನು ಇಲ್ಲಿ ತಂದು ಹಾಕುತ್ತಿದೆ. ಅಗ್ನಿ ಅನಾಹುತದಲ್ಲಿ ಕರಟಿದ ಎಲ್ಲ ಮರಮಟ್ಟುಗಳನ್ನು ಪುರಸಭೆಯೇ ತಂದು ನದಿ ಬುಡದಲ್ಲಿ ಹಾಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು

ದುರಂತ ನಡೆದಾಗ ಅದು ಇನ್ನಷ್ಟು ಹೆಚ್ಚಾಗದಂತೆ ತಡೆಯುವುದು, ಪರಿಹಾರ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಅದರಂತೆ 11 ಲೋಡು ಕಟ್ಟಡ, ಅಗ್ನಿ ತ್ಯಾಜ್ಯವನ್ನು ಸೂಕ್ತ ಸ್ಥಳಾವಕಾಶ ಆ ಕ್ಷಣಕ್ಕೆ ಲಭ್ಯವಾಗದ ಹಿನ್ನೆಲೆಯಲ್ಲಿ ರಿಂಗ್ ರೋಡ್ ಸಮೀಪ ಹಾಕಲಾಗಿದೆ. ಶೀಘ್ರವೇ ಅದನ್ನು ತೆರವು ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net