ಪಡುಬಿದ್ರಿ ಗ್ರಾಪಂಗೆ ತ್ಯಾಜ್ಯ ಸವಾಲು

 ಪಡುಬಿದ್ರಿ ರತ್ನ ನರ್ಸರಿ ಸಂಪರ್ಕ ರಸ್ತೆಯಲ್ಲಿ ತ್ಯಾಜ್ಯ ಸುರಿದು ಸಂಚಾರಕ್ಕೆ ತೊಡಕಾಗುತ್ತಿದೆ.
ಪಡುಬಿದ್ರಿ ರತ್ನ ನರ್ಸರಿ ಸಂಪರ್ಕ ರಸ್ತೆಯಲ್ಲಿ ತ್ಯಾಜ್ಯ ಸುರಿದು ಸಂಚಾರಕ್ಕೆ ತೊಡಕಾಗುತ್ತಿದೆ.
Published on

ಹೇಮನಾಥ್ ಪಡುಬಿದ್ರಿ

ಉಡುಪಿ ಜಿಲ್ಲೆಯ ಅತಿದೊಡ್ಡ ಗ್ರಾಮ ಪಂಚಾಯಿತಿಗಳಲ್ಲೊಂದಾದ ಪಡುಬಿದ್ರಿ ಗ್ರಾಪಂಗೆ ಬೀದಿ ಬದಿ ಸುರಿಯುವ ತ್ಯಾಜ್ಯ ಹತೋಟಿಗೆ ತರುವುದೇ ದೊಡ್ಡ ಸವಾಲಾಗುತ್ತಿದೆ.
20 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಗ್ರಾಪಂ ವ್ಯಾಪ್ತಿಯಲ್ಲಿ 5,500 ಮನೆಗಳಿದ್ದು, ಕೇವಲ 2,200 ಮನೆಗಳಿಂದ ಕಸ ಸಂಗ್ರಹವಾಗುತ್ತಿದೆ. ದಶಕಗಳಿಂದ ತ್ಯಾಜ್ಯಗಳಿಂದ ತುಂಬಿ ಕಪ್ಪುಚುಕ್ಕೆ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ ಗ್ರಾಪಂನ ಕೆಲ ವಾರ್ಡ್‌ಗಳನ್ನು ಸ್ವಚ್ಛಗೊಳಿಸಿ, ದಂಡನೆ ಬ್ಯಾನರ್ ಅಳವಡಿಸಿ, ಸಿಸಿ ಕ್ಯಾಮರಾ ಕಣ್ಗಾವಲಿರಿಸಿ ಹತೋಟಿಗೆ ತರುವ ಪ್ರಯತ್ನಗಳು ನಡೆದಿವೆ. ಆದರೆ ಅದನ್ನು ಮೀರಿ ಮತ್ತೊಂದೆಡೆ ತ್ಯಾಜ್ಯ ಸುರಿಯುವ ಪ್ರವೃತ್ತಿ ಜನರಿಂದ ಮುಂದುವರಿಯುತ್ತಿದೆ. ಅದರಲ್ಲೂ ಬಾಡಿಗೆ ಮನೆಗಳಲ್ಲಿರುವ ಅನ್ಯ ಜಿಲ್ಲೆ, ರಾಜ್ಯಗಳ ಬಾಡಿಗೆದಾರರೆ ಮನೆ ಮುಂದೆ ಹಾಗೂ ರಸ್ತೆ ಬದಿ ತ್ಯಾಜ್ಯ ಸುರಿದು ಪರಿಸರ ಹಾಳು ಮಾಡುತ್ತಿರುವುದು ಗ್ರಾಪಂಗೆ ತಲೆ ನೋವಾಗಿ ಪರಿಣಮಿಸಿದೆ.

ಸಂಪೂರ್ಣ ಕಸ ಸಂಗ್ರಹಕ್ಕೆ ಕೂಡಿ ಬಂದಿಲ್ಲ ಕಾಲ

ಹಲವು ವರ್ಷಗಳ ಹಿಂದೆಯೇ ಲಕ್ಷಾಂತರ ವೆಚ್ಚದಲ್ಲಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ಘನತ್ಯಾಜ್ಯ ವಿಲೇ ಘಟಕ ಆರಂಭಿಸಿ ಹಸಿ ಹಾಗೂ ಒಣಕಸ ಸಂಗ್ರಹಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ದಿನ ಕಳೆದಂತೆ ಘಟಕದಲ್ಲಿ ಸಂಗ್ರಹಿಸಿದ್ದ ಕಸ ವಿಲೇಗೆ ಸಮಸ್ಯೆಗಳು ಕಾಡತೊಡಗಿದ್ದವು. ಬಳಿಕ ಅಲ್ಲಿ ಸಂಗ್ರಹಿಸಿದ್ದ ತ್ಯಾಜ್ಯವನ್ನು ಇತರ ಗ್ರಾಮಗಳಲ್ಲಿ ಕಾಡಿಬೇಡಿ ಸುರಿದು ವಿಲೇ ಮಾಡಬೇಕಾದ ಪರಿಸ್ಥಿತಿ ಎದುರಾಯಿತು.

ಎಲ್ಲೂರು ಎಂಆರ್‌ಎಫ್ ಘಟಕದಲ್ಲಿ ವಿಲೇ

ಕಾಪು ತಾಲೂಕಿನ ಗ್ರಾಪಂಗಳಿಗೆ ಅನುಕೂಲಕರವಾಗಿ ಎಲ್ಲೂರು ಗ್ರಾಮದಲ್ಲಿ ನಿರ್ಮಾಣವಾಗಿರುವ ಎಂಆರ್‌ಎಫ್ ಘಟಕದಲ್ಲಿ ಪಡುಬಿದ್ರಿ ಗ್ರಾಪಂ ಘನತ್ಯಾಜ್ಯವನ್ನು ವಿಲೇ ಮಾಡಲಾಗುತ್ತಿದೆ. ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಪಂಚಾಯಿತಿ ಸಹಿತ ನಿತ್ಯ ನೂರಾರು ಜನ ಸಂಚರಿಸುವ ಪಡುಬಿದ್ರಿ, ಅಬ್ಬೇಡಿ, ಕಂಚಿನಡ್ಕ ರಾಘವೇಂದ್ರ ಮಠ, ಅಲಂಗಾರ್ ಸಂಪರ್ಕ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಅಲ್ಲಿಯೇ ಮೂಟೆಯಲ್ಲಿ ತಂದು ತ್ಯಾಜ್ಯ ಸುರಿಯಲಾಗುತ್ತಿದೆ. ಬೆಳೆಯುತ್ತಿರುವ ಪಟ್ಟಣವಾಗಿರುವ ಪಡುಬಿದ್ರಿಯಲ್ಲಿ ಕೈಗಾರಿಕಾ ಘಟಕ, ವಸತಿ ಸಂಕೀರ್ಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಅದಕ್ಕೆ ಹೊಂದಿಕೊಂಡಂತೆ ವಲಸೆ ಕಾರ್ಮಿಕರ ಸಂಖ್ಯೆಯೂ ಅಧಿಕವಾಗುತ್ತಿದೆ.
ಸೂಕ್ತ ಮೂಲಸೌಕರ್ಯವಿಲ್ಲದ ಕಡೆ ಬಾಡಿಗೆ ಕೋಣೆ ಪಡೆದು ವಾಸಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮನೆಗಳ ಕಸ ಸಂಗ್ರಹಕ್ಕೆ ಗ್ರಾಪಂ ವಾಹನಗಳು ಬಂದರೂ ಬಾಡಿಗೆ ಮನೆಗಳಲ್ಲಿರುವವರು ಶುಲ್ಕ ಪಾವತಿಸಬೇಕಾದ ಕಾರಣ ಕಸ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮನೆ ಮಾಲೀಕರೂ ಕಸ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡದ ಪರಿಣಾಮ ಸಮಸ್ಯೆ ಎದುರಾಗುತ್ತಿದ್ದು, ಗ್ರಾಪಂ ಮಾಲೀಕರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸ್ವಚ್ಛ ಪರಿಸರಕ್ಕೆ ಗಮನಹರಿಸಬೇಕೆನ್ನುವ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಮುಚ್ಚಿದ ಗೊಬ್ಬರ ತಯಾರಿ ಘಟಕ

ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಹಸಿತ್ಯಾಜ್ಯ ಸಂಗ್ರಹಣೆಯಿಂದಾಗುತ್ತಿದ್ದ ಸಮಸ್ಯೆ ಪರಿಹರಿಸುವ ಸಲುವಾಗಿ ಪಲಿಮಾರು ಗ್ರಾಪಂ ವ್ಯಾಪ್ತಿಗೆ ಸೇರಿದ ವ್ಯಕ್ತಿಯೊಬ್ಬರ ಖಾಸಗಿ ಜಮೀನೊಂದನ್ನು ಗೊತ್ತುಪಡಿಸಿ ಲಕ್ಷಾಂತರ ರೂ. ವೆಚ್ಚ ಮಾಡಿ ಹಸಿತ್ಯಾಜ್ಯ ಗೊಬ್ಬರ ಘಟಕ ಆರಂಭಿಸಲಾಗಿತ್ತು. ಜಾಗಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಕೆಲವೇ ತಿಂಗಳಷ್ಟೇ ಕಾರ್ಯಾಚರಿಸಿದ್ದ ಆ ಘಟಕ ಬಾಗಿಲು ಮುಚ್ಚುವಂತಾಯಿತು. ಬಳಿಕ ಹಸಿತ್ಯಾಜ್ಯ ಸಂಸ್ಕರಣೆಗೆ ಸೂಕ್ತ ಜಾಗಕ್ಕಾಗಿ ಹುಡುಕಾಟ ಮುಂದುವರಿದಿದೆ.

ಪ್ರಸ್ತುತ ಗ್ರಾಪಂ ವ್ಯಾಪ್ತಿಯಲ್ಲಿ 8 ಕ್ವಿಂಟಾಲ್ ಒಣಕಸ, 5 ಕ್ವಿಂಟಾಲ್ ಹಸಿಕಸ ಸಂಗ್ರಹವಾಗುತ್ತಿದೆ. ಒಣಕಸವನ್ನು ಎಲ್ಲೂರು ಘಟಕದಲ್ಲಿ ವಿಲೇ ಮಾಡಲಾಗುತ್ತಿದೆ. 3 ಕ್ವಿಂಟಾಲ್‌ನಷ್ಟು ಸ್ಯಾನಿಟರಿ ಪ್ಯಾಡ್ ಸಂಗ್ರಹವಾಗುತ್ತಿದ್ದು. ಅದನ್ನು ಗ್ರಾಪಂ ಘಟಕದಲ್ಲಿ ಬರ್ನಿಂಗ್ ಮಾಡಲಾಗುತ್ತಿದೆ. ವರ್ಷವೊಂದರಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿದ ಏಳೆಂಟು ಪ್ರಕರಣಗಳಲ್ಲಿ 23 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಕಸ ಸುರಿಯುವ ಬ್ಲಾೃಕ್ ಸ್ಪಾಟ್‌ಗಳಲ್ಲಿ ಸಿಸಿ ಕ್ಯಾಮರಾ, ದಂಡನೆ ಬ್ಯಾನರ್ ಹಾಗೂ ಬಣ್ಣ ಬಳಿದ ಟಯರ್‌ಗಳನ್ನು ನೇತು ಹಾಕಿ ಹತೋಟಿಗೆ ಕ್ರಮ ವಹಿಸಲಾಗಿದೆ.

— ಮಂಜುನಾಥ ಶೆಟ್ಟಿ ಪಿಡಿಒ ಪಡುಬಿದ್ರಿ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net