ವಿಟಿಯು ವಲಯ, ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ಸಂಪನ್ನ

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದ ವಿಜೇತ ತಂಡದ ಆಟಗಾರರು ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದ ವಿಜೇತ ತಂಡದ ಆಟಗಾರರು ಪ್ರಶಸ್ತಿ ಸ್ವೀಕರಿಸಿದರು.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ವಲಯ ಅಂತರ್ ಕಾಲೇಜುಗಳ ಪುರುಷರ ಕಬಡ್ಡಿ ಪಂದ್ಯಾಟ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್ ವಲಯ ಕಾಲೇಜುಗಳ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ ಸಂಪನ್ನಗೊಂಡಿತು.
ಎರಡು ದಿನ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಅಂತರ್ ವಲಯ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮಂಗಳೂರಿನ ಎಜೆ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಹಾಗೂ ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪುರುಷರ ತಂಡ ಫೈನಲ್ ಪ್ರವೇಶಿಸಿತು. ಅಂತಿಮ ಸುತ್ತಿನಲ್ಲಿ ಮಂಗಳೂರಿನ ಎಜೆ ಇನ್‌ಸ್ಟಿಟ್ಯೂಟ್ ತಂಡ 35-24 ಅಂಕಗಳ ಅಂತರದಿಂದ ಚಾಂಪಿಯನ್ ಪಟ್ಟ ಅಲಂಕರಿಸಿತು. ಚಿಕ್ಕಬಳ್ಳಾಪುರದ ಶ್ರೀ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಸಂಸ್ಥೆ ತೃತೀಯ, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು.
ವಿಟಿಯು ವಲಯ ಮಟ್ಟದ ಫಲಿತಾಂಶ: ಮೇ 15ರಂದು ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮಂಗಳೂರು ವಲಯದ ಅಂತರ್ ಕಾಲೇಜುಗಳ ಪಂದ್ಯಾಟದಲ್ಲಿ ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪುರುಷರ ತಂಡ ಮಂಗಳೂರಿನ ಎಜೆ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ತಂಡದ ವಿರುದ್ದ ಜಯ ಸಾಧಿಸಿತು. ಮಂಗಳೂರಿನ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತೃತೀಯ, ಉಜಿರೆ ಎಸ್‌ಡಿಎಎಂ ತಾಂತ್ರಿಕ ಮಹಾವಿದ್ಯಾಲಯ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಉಜಿರೆಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಟಿ., ಎಸ್‌ಡಿಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ಕಬಡ್ಡಿ ತರಬೇತುದಾರ ಉಜಿರೆಯ ಕೃಷ್ಣಾನಂದ ರಾವ್ ಹಾಗೂ ಬೆಳಗಾವಿ ವಿಟಿಯು ದೈಹಿಕ ಶಿಕ್ಷಣ ವಿಭಾಗದ ಡಾ.ರಾಜೇಶ್ ವಿಜೇತರಿಗೆ ಬಹುಮಾನ ವಿತರಿಸಿದರು. ಉಪನ್ಯಾಸಕ ಡಾ.ರವೀಶ್ ಪಡುಮಲೆ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ್ ಕ್ರೀಡಾಕೂಟ ಆಯೋಜಿಸಿದರು.

ವಿಟಿಯು ತಂಡದ ಆಯ್ಕೆ ಪರೀಕ್ಷೆ

ಪಂದ್ಯಾಟ ಮುಕ್ತಾಯದ ಬಳಿಕ ವಿಟಿಯು ಕಬಡ್ಡಿ ತಂಡದ ಆಯ್ಕೆ ಪರೀಕ್ಷೆ ನಡೆಯಿತು. ರಾಜ್ಯದ ವಿವಿಧ ಕಾಲೇಜುಗಳಿಂದ ಸುಮಾರು 125ಕ್ಕೂ ಅಧಿಕ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಿದ್ದರು. ಆಯ್ಕೆ ಸಮಿತಿಯ ಸದಸ್ಯರಾಗಿ ಸೋಮಶೇಖರ್, ಡಾ. ಮುರಳೀಧರ, ಗಂಗಾಧರ್ ಹಾಗೂ ಬಾಲಚಂದ್ರ ಗೌಡ ಕಾರ್ಯನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net