ಉಡುಪಿಯ ಕಂಡೀರಾ... ಮುದ್ದು ಕೃಷ್ಣನ ಕಂಡೀರಾ..?

ಉಡುಪಿ ಮಠದಲ್ಲಿ ಜನ್ಮಾಷ್ಟಮಿಯ ಮಾರನೆಯ ದಿನವಾದ ಶನಿವಾರ (ಸೆ.5) ಪರ್ಯಾಯ ಶೀರೂರು ಮಠದಿಂದ ಆಚರಿಸಿದ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)ದ ನಿಮಿತ್ತ ದೇವರಿಗೆ 'ವಜ್ರ ಬಾಲಕೃಷ್ಣ'ನ ಅಲಂಕಾರ ಮಾಡಲಾಗಿತ್ತು. ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ನಿಮಿತ್ತ ಶ್ರೀಕೃಷ್ಣ ಮಠದೊಳಗೆ ವೇದವರ್ಧನ ಶ್ರೀಗಳು ಪಲ್ಲ ಪೂಜೆ ನೆರವೇರಿಸಿದರು.
ಉಡುಪಿ ಮಠದಲ್ಲಿ ಜನ್ಮಾಷ್ಟಮಿಯ ಮಾರನೆಯ ದಿನವಾದ ಶನಿವಾರ (ಸೆ.5) ಪರ್ಯಾಯ ಶೀರೂರು ಮಠದಿಂದ ಆಚರಿಸಿದ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)ದ ನಿಮಿತ್ತ ದೇವರಿಗೆ 'ವಜ್ರ ಬಾಲಕೃಷ್ಣ'ನ ಅಲಂಕಾರ ಮಾಡಲಾಗಿತ್ತು. ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ನಿಮಿತ್ತ ಶ್ರೀಕೃಷ್ಣ ಮಠದೊಳಗೆ ವೇದವರ್ಧನ ಶ್ರೀಗಳು ಪಲ್ಲ ಪೂಜೆ ನೆರವೇರಿಸಿದರು.
Published on

* ನಂದಕಂದನಿಗೆ ಪರ್ಯಾಯ ವೇದವರ್ಧನ ಶ್ರೀಗಳಿಂದ ಪೂಜೆ

* ರಥಬೀದಿಯಲ್ಲಿ ಭಕ್ತ ಸಾಗರ-ಸಡಗರ, ಹುಲಿ ವೇಷಧಾರಿಗಳ ಅಬ್ಬರ  

ಪ್ರಶಾಂತ ಭಾಗ್ವತ ಉಡುಪಿ
ಪೊಡವಿಗೊಡೆಯ ಶ್ರೀಕೃಷ್ಣನ ನಗರಿಯಲ್ಲಿ ಜನ್ಮಾಷ್ಟಮಿಯ ಸಡಗರ-ಸಂಭ್ರಮ. ಎಲ್ಲೆಲ್ಲೂ ಮುದ್ದು ಕೃಷ್ಣನ ಧ್ಯಾನ. ರಥಬೀದಿಯಲ್ಲಿ ಭಕ್ತರ ಪ್ರವಾಹ. ನಗರದಾದ್ಯಂತ ಹುಲಿ-ಮಹಿಷಾಸುರ, ಇನ್ನಿತರ ವೇಷಧಾರಿಗಳ ಅಬ್ಬರ. ಇದು ನಂದಕಂದ ಮುಕುಂದನ ಜನ್ಮದಿನದ ಮಾರನೆಯ ದಿನ ಉಡುಪಿಯಲ್ಲಿ ಕಂಡುಬಂದ ಝಲಕ್​.
ವಿಟ್ಲಪಿಂಡಿ ಹಾಗೂ ಶ್ರಾವಣ ಶನಿವಾರದ ನಿಮಿತ್ತ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಸಂಪ್ರದಾಯದಂತೆ ಶ್ರೀಕೃಷ್ಣನಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಬೆಳಗ್ಗೆ 9 ಗಂಟೆಗೆ ಪಲ್ಲ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ಭೋಜನಕ್ಕೆ ಚಾಲನೆ ನೀಡಿದರು.
30 ಸಾವಿರ ಜನರಿಗೆ ಭೋಜನ ವ್ಯವಸ್ಥೆ
ವಿಡ್ಲಪಿಂಡಿ ನಿಮಿತ್ತ ಬೆಳಗ್ಗೆ 9:30ರಿಂದಲೇ ರಾಜಾಂಗಣದಲ್ಲಿ ಹಾಗೂ ಮಠದ ಒಳಗಿರುವ ಭೋಜನ ಶಾಲೆಯಲ್ಲಿ ಭಕ್ತರಿಗೆ ಪ್ರಸಾದ ಭೋಜನ ಆರಂಭಗೊಂಡಿತು. ರಾಜಾಂಗಣದಲ್ಲಿ ಬಫೆ ವ್ಯವಸ್ಥೆ ಮಾಡಲಾಗಿದ್ದು ಸುಮಾರು 30 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಶ್ರಾವಣ ಶನಿವಾರದ ನಿಮಿತ್ತ ಸಾವಿರು ಭಕ್ತರು ನೆಲದಲ್ಲಿ ಊಟ ಮಾಡಿದರು. ಸುಮಾರು 800 ಜನರು ಭಕ್ತರಿಗೆ ಬಡಿಸುವ ಸೇವೆ ನಡೆಸಿದರು.

ಮಜ್ಜಿಗೆ ಉಚಿತ ಸೇವೆ

ವಿಪರೀತ ಬಿಸಿಲು ಇರುವ ಹಿನ್ನೆಲೆಯಲ್ಲಿ ಶೀರೂರು ಮಠದ ವತಿಯಿಂದ ಪೇಜಾವರ ಮಠದ ಮುಂಭಾಗದಲ್ಲಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್​ನ ನಿರ್ವಹಣೆಯಲ್ಲಿ ಮಸಾಲೆ ಮಜ್ಜಿಗೆ ಉಚಿತ ಸೇವೆಗೆ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ಚಾಲನೆ ನೀಡಿದರು. ರಾಘವೇಂದ್ರ ಮಠದ ಮುಂಭಾಗದಲ್ಲಿ ಮೂಡಬೆಟ್ಟು ಶ್ರೀಕೃಷ್ಣ ವೃದ್ಧರ ಆಶ್ರಯ ಧಾಮದ ವತಿಯಿಂದ ಆಯೋಜಿಸಿದ್ದ ಉಚಿತ ಮಜ್ಜಿಗೆ ಸೇವೆಗೆ ಶ್ರೀಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಚಾಲನೆ ನೀಡಿದರು. 
ಮಹಿಷಾಸುರನೊಂದಿಗೆ ಸೆಲ್ಫಿ
ರಥಬೀದಿಯಲ್ಲಿ ಮಹಿಷಾಸುರ ವೇಷಧಾರಿಗಳ ಅಬ್ಬರವಿತ್ತು. ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ಹೊರ ಜಿಲ್ಲೆ ಹಾಗೂ ರಾಜ್ಯಗಳ ಪ್ರವಾಸಿಗರು, ಭಕ್ತರು ಮಹಿಷಾಸುರರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತಸಪಡುತ್ತಿದ್ದ ದೃಷ್ಯ ಕಂಡುಬಂತು. ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು ಹುಲಿಯ ವೇಷಹಾಕಿ ಕುಣಿಯುತ್ತಿರುವುದು ಸಾಮಾನ್ಯವಾಗಿತ್ತು. 
ಗಮನ ಸೆಳೆದ ನಿಧಿಕುಂಬ
ವಿಟ್ಲಪಿಂಡಿ ಉತ್ಸವದ ನಿಮಿತ್ತ ಶೀರೂರು ಮಠದ ಮುಂಭಾಗದಲ್ಲಿ 'ನಿಧಿ ಕುಂಬ' ಸ್ಪರ್ಧೆ ಆಯೋಜಿಸಲಾಗಿತ್ತು. ಸುಮಾರು 30 ಅಡಿ ಎತ್ತರದ ಅಡಿಕೆ ಮರದ ತುದಿಯಲ್ಲಿ ನಿಗದಿತ ಮೌಲ್ಯವನ್ನು ಗಂಟಿನಲ್ಲಿ ಇಡಲಾಗಿದ್ದು, ಅದನ್ನು ಮರವೇರಿ ಪಡೆದುಕೊಳ್ಳಬೇಕು. ಆದರೆ, ಮರಕ್ಕೆ ಗ್ರೀಸ್​ ಬಳಿಯಲಾಗಿದ್ದು ಸುಲಭವಾಗಿ ಏರಲು ಆಗುತ್ತಿರಲಿಲ್ಲ. ಅನೇಕರು ಪ್ರಯತ್ನ ಪಡುತ್ತಿರುವುದು ಕಂಡುಬಂತು. ಯಾರೋ ಒಬ್ಬರು ಮರವೇರಿ ಅಲ್ಲಿದ್ದ ನಿಧಿಯನ್ನು ಪಡೆದುಕೊಂಡು ಹೋದರು.

ತಲಾ 1.50 ಲಕ್ಷ ಚಕ್ಕುಲಿ, ವಿವಿಧ ಲಡ್ಡು

ವಿಟ್ಲಪಿಂಡಿಯಂದು ಶ್ರೀಕೃಷ್ಣನ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲು ಪರ್ಯಾಯ ಶೀರೂರು ಮಠದಿಂದ 1.50 ಲಕ್ಷ ಚಕ್ಕುಲಿ, 30 ಸಾವಿರದಂತೆ ತಲಾ ಐದು ಬಗೆಯ ಲಡ್ಡು ಮಾಡಲಾಗಿದೆ. ಗುಂಡಟ್ಟು, ಅರಳು, ಸಜ್ಜಿಗೆ, ಯಳ್ಳು ಹಾಗೂ ನೆಲಕಡ್ಲೆಯಿಂದ ಉಂಡೆ ತಯಾರಿಸಲಾಗಿದೆ. ತಲಾ 2 ಚಕ್ಕುಲಿ ಹಾಗೂ 2 ಉಂಡೆಯನ್ನೊಳಗೊಂಡ ಪ್ಯಾಕೆಟ್​ ತಯಾರಿಸಲಾಗಿದೆ. ರಾಜಾಂಗಣದಲ್ಲಿ ಪ್ರಸಾದ ಸೇವನೆಯ ವೇಳೆ ವಿವಿಧ ಮಹಿಳಾ ತಂಡಗಳಿಂದ ನಿರಂತರ ಭಜನೆಯನ್ನೂ ಆಯೋಜಿಸಲಾಗಿದೆ ಎಂದು ಶೀರೂರು ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ ತಿಳಿಸಿದರು.

ಶ್ರೀಕೃಷ್ಣನ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಆಚರಣೆ ಉಡುಪಿಯ ವಿಶೇಷ. ನಮಗಿದು ಪ್ರಥಮ ಪರ್ಯಾಯ. ಕಳೆದ ಸುಮಾರು 9 ತಿಂಗಳಿಂದ ನಿತ್ಯ ಕೃಷ್ಣ ಪೂಜೆ ಮಾಡುವಾಗ ಅದೇನೋ ಭಕ್ತಿಭಾವ ಇರುತ್ತಿತ್ತು. ಆದರೆ, ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯಂದು ಕೃಷ್ಣನ ಆರಾಧನೆ ಅತೀವ ಸಂತಸ ತರುತ್ತಿತ್ತು. ಭಕ್ತರ ಸಡಗರ ಕಂಡು ನಮಗೂ ಖುಷಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net