

ಸಂಸ್ಕೃತ-ಸಂಸ್ಕೃತಿ ಬಿಟ್ಟರೆ ಮನುಷ್ಯನಿಗೆ ಬದುಕಿಲ್ಲ. ಪಾಶ್ಚಿಮಾತ್ಯ ಅನುಸರಣೆಗೆ ಒಳಗಾಗಿ ದೇಸೀಯವಲ್ಲದ ಸಂಸ್ಕೃತಿಗೆ ಆಸೆಪಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಭಾರತೀಯ ಸನಾತನ ಸಂಸ್ಕೃತಿಯನ್ನು ಪ್ರಪಂಚಕ್ಕೆ ಸಾರಬೇಕಾದ ಅಗತ್ಯತೆ ಇದೆ. ನೀರಿಗಿಂತ ಹಾಲಿಗೆ ಹೆಚ್ಚಿನ ಬೆಲೆಯಿದೆ ಎಂದು ಮೀನನ್ನು ಹಾಲಿಗೆ ಬಿಟ್ಟರೆ ಅದು ಬದುಕದು. ಹೀಗಾಗಿ ನಮ್ಮ ಸಂಸ್ಕೃತಿಗಿಂತ ಪಾಶ್ಚಾತ್ಯ ಸಂಸ್ಕೃತಿ ಅಪ್ಪಿಕೊಂಡರೆ ಹಾಲಿಗೆ ಬಿಟ್ಟ ಮೀನಿನ ಸ್ಥಿತಿ ನಮಗಾಗುತ್ತದೆ. ಎಲ್ಲರ ಮನೆಯಲ್ಲಿ ಭಗವದ್ಗೀತೆ ಇರಬೇಕು. ಆಗಲೇ ಅದು ಹಿಂದುಗಳ ಮನೆಯಾಗಲು ಸಾಧ್ಯ. ಮಕ್ಕಳಿಗೆ ಗೀತೆಯನ್ನು ಓದಲು, ಬರೆಯಲು ಎಲ್ಲ ಪಾಲಕರೂ ಅವಕಾಶ ಮಾಡಿಕೊಡಬೇಕು.
ಮಧ್ವಾಚಾರ್ಯರ ಗುರು ಪರಂಪರೆಯ ನಾಡು ಉಡುಪಿ. ಕೃಷ್ಣ ಇಲ್ಲಿನ ಆರಾಧ್ಯ ದೈವ. ಆತ ವಿಶ್ವಾರಾಧ್ಯ ದೇವ. ಇಲ್ಲಿನ ಸಾಧುಸಂಗ ತೃಪ್ತಿ ತಂದಿದೆ. ವೈಷ್ಣವರೆಲ್ಲ ಎಲ್ಲಿ ಸೇರುತ್ತಾರೆಯೋ ಅದೇ ವೃಂದಾವನ. ವಿಷ್ಣು-ಕೃಷ್ಣ ಇಬ್ಬರೂ ಒಂದೇ. ಭಗವದ್ಗೀತೆಯು ಎಲ್ಲ ವೇದಗಳಿಗೂ ಸಮಾನ. ಅದರಲ್ಲಿರುವ ಜ್ಞಾನ, ಭಕ್ತಿ ಅನನ್ಯ. ಕೃಷ್ಣನನ್ನು ಚಿಂತಿಸಿದರೆ ಬದುಕಿನಲ್ಲಿ ಚಿಂತೆ ಬರದು. ಕೃಷ್ಣಾ ಎಂದರೆ ಅಗಾಧ ಜ್ಞಾನ. ಯಾರು ಭಕ್ತಿಯಿಂದ ಸಂಪೂರ್ಣವಾಗಿ ಆತನಿಗೆ ಶರಣಾಗುತ್ತಾರೋ ಅವರೆಲ್ಲರ ಯೋಗಕ್ಷೇಮವನ್ನು ಕೃಷ್ಣನೇ ನೋಡಿಕೊಳ್ಳುತ್ತಾನೆ. ಗೀತೆ ಎಲ್ಲವನ್ನೂ ನೀಡಿದೆ. ಅದರ ಅನುಸರಣೆ ಮಾಡಿದರೆ ಜೀವನ ಸಾರ್ಥಕ.
ವಿಶ್ವವೇ ಇಂದು ಕ್ಷಣ ಕ್ಷಣಕ್ಕೂ ಒತ್ತಡಕ್ಕೆ ಒಳಗಾಗುತ್ತಿದೆ. ಮೊಬೈಲ್ ಬಂದ ನಂತರವಂತೂ ಎಲ್ಲರಿಗೂ ಒತ್ತಡ ಹೆಚ್ಚುತ್ತಲೇ ಇದೆ. ಎಷ್ಟೇ ಔಷಧೋಪಚಾರ ಮಾಡಿದರೂ ಒತ್ತಡ ಕಡಿಮೆ ಆಗುತ್ತಿಲ್ಲ. ಭಗವದ್ಗೀತೆಯ ಪಠಣದಿಂದ ಒತ್ತಡ ನಿವಾರಣೆ ಆಗಲು ಸಾಧ್ಯ. ಭಗವದ್ಗೀತೆ ಕೇವಲ ಹಿಂದು ಧರ್ಮದ ಗ್ರಂಥವಲ್ಲ. ಅದು ಎಲ್ಲರಿಗೂ ಸನ್ಮತಿ ನೀಡುವ ಗ್ರಂಥ.
ಸೋಲು-ಗೆಲುವು ನನಗೆ ಬಾಧಿಸದು
ಧರ್ಮ ಮತ್ತು ಸಂವಿಧಾನ ಬೇರೆಯಲ್ಲ. ಭಗವದ್ಗೀತೆಯೆಂದರೆ ವಿಜ್ಞಾನ. ಕೃಷ್ಣ ದೇವರು ನನ್ನ ಬದುಕಿನ ಪ್ರೇರಣೆ. ನನಗೆ ಭಗವದ್ಗೀತೆಯ ಶ್ಲೋಕ ಗೊತ್ತಿಲ್ಲದಿರಬಹುದು. ಆದರೆ, ಅದರ ಸಾರ ತಿಳಿಸಿದೆ. ಅದರಿಂದ ಶಕ್ತಿ ಪಡೆದಿದ್ದೇನೆ. ನಿಷ್ಕಾಮ ಕರ್ಮನ್ನು ಭಗವದ್ಗೀತೆಯಿಂದ ನಾನು ಕಲಿತಿದ್ದೇನೆ. ಹೀಗಾಗಿ ಚುನಾವಣೆಯ ಸೋಲು-ಗೆಲುವು ನನಗೆ ಬಾಧಿಸದು. ಸತ್ಯದ ಬಲದಲ್ಲಿ ನನ್ನ ಹೋರಾಟ ನಡೆಸುತ್ತೇನೆ. ಮೌನ ಯಾವುದಕ್ಕೂ ಪರಿಹಾರವಲ್ಲ.