ಮಕ್ಕಳ ಸುರಕ್ಷತೆ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ

 ಅಳಿವೆಕೋಡಿಯ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿ ಮಾಡುವಂತೆ ಆಗ್ರಹಿಸಿ ಮೀನುಗಾರ ಮುಖಂಡ ನಾಗೇಶ ಖಾರ್ವಿ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಪ್ರತಿಭಟಿಸಿದರು.
ಅಳಿವೆಕೋಡಿಯ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿ ಮಾಡುವಂತೆ ಆಗ್ರಹಿಸಿ ಮೀನುಗಾರ ಮುಖಂಡ ನಾಗೇಶ ಖಾರ್ವಿ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಪ್ರತಿಭಟಿಸಿದರು.
Published on
ವಿಜಯವಾಣಿ ಸುದ್ದಿಜಾಲ ಬೈಂದೂರು
ನಮ್ಮ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯ ಹಲವೆಡೆ ದೊಡ್ಡ ದೊಡ್ಡ ಗುಂಡಿಗಳಾಗಿವೆ. ಇದರಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ, ಸೋಮವಾರ ಪಡುವರಿ ಗ್ರಾಮದ ಅಳಿವೆಕೋಡಿಯ ಗ್ರಾಮಸ್ಥರು ಮೀನುಗಾರರ ಮುಖಂಡ ನಾಗೇಶ ಖಾರ್ವಿ ನೇತೃತ್ವದಲ್ಲಿ ಬೈಂದೂರು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಈ ರಸ್ತೆಯಲ್ಲಿ ಪ್ರತಿದಿನ ಶಾಲಾ ವಾಹನಗಳು ಹಾಗೂ 150 ಮಕ್ಕಳು ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾರೆ. ಸಾರ್ವಜನಿಕರು, ರೈತರು, ಮೀನುಗಾರರು ಹಾಗೂ ತುರ್ತು ವೈದ್ಯಕೀಯ ಆಂಬುಲೆನ್ಸ್‌ಗಳು ತೆರಳುತ್ತವೆ. ಇದೀಗ ರಸ್ತೆ ಹದಗೆಟ್ಟಿರುವುದರಿಂದ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಸಂಚಾರ ದುಸ್ತರವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ಈ ರಸ್ತೆಯನ್ನು ತುರ್ತು ಆದ್ಯತೆ ಮೇರೆಗೆ ದುರಸ್ತಿ ವಾಡುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ತಹಸೀಲ್ದಾರ್ ರವಿರಾಜ್ ದೀಕ್ಷಿತ್ ಹಾಗೂ ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್ ಅವರಿಗೆ ಮನವಿ ಸಲ್ಲಿಸಿದರು.

ಪಂಚಾಯಿತಿ ಅಭಿವೃದ್ಧಿಗೆ ಮೂರು ವರ್ಷಗಳಿಂದ 15ನೇ ಹಣಕಾಸು ಯೋಜನೆಯಲ್ಲಿ ದೊರೆಯಬೇಕಿರುವ ಅನುದಾನ ಇನ್ನೂ ಬಂದಿಲ್ಲ. ಬಹುತೇಕ ಕಾಮಗಾರಿ ಟೆಂಡರ್ ಆಗಿದ್ದು, ಯಾವುದೇ ಅನುದಾನ ಬಾರದೆ ಇರುವ ಕಾರಣ ಕಾಮಗಾರಿ ಆರಂಭಿಸಿಲ್ಲ. ಈ ಬಗ್ಗೆ ಸರ್ಕಾರದ ವಿಶೇಷ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ತುರ್ತು ಕಾಮಗಾರಿಗಳಿಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅನುದಾನ ಒದಗಿಸಿದಲ್ಲಿ ಸ್ವಲ್ಪಮಟ್ಟಿಗೆ ಸಹಾಯವಾಗುತ್ತಿತ್ತು.

— ಅಜಯ್ ಭಂಡಾರ್ಕರ್, ಪಪಂ ಮುಖ್ಯಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net