ಉಡುಪಿ: ನಿಸರ್ಗದ ಮಡಿಲಿನಿಂದ ದೂರ ಸರಿದು ಬದುಕುತ್ತಿರುವುದರಿಂದಲೇ ಪ್ರಪಂಚದಲ್ಲಿ ಅಸಹಜ ವಿದ್ಯಮಾನಗಳು ಘಟಿಸುತ್ತಿವೆ. ಹಳ್ಳಿಯ ಪರಿಸರ, ಸರಳ ಜನಜೀವನ, ಸಹಜ ನಡೆನುಡಿಗಳೇ ನಮ್ಮ ನಿಜವಾದ ಬದುಕು. ಅದರಿಂದ ಪಡೆಯಬಹುದಾದ ಅಧ್ಯಾತ್ಮದ ಅನುಭವವು ನಮ್ಮನ್ನು ಅತ್ಯುನ್ನತ ಸಾಧನೆಯತ್ತ ಕೊಂಡೊಯ್ಯುತ್ತವೆ. ಹಳ್ಳಿಯ ಬದುಕೇ ಬಹುದೊಡ್ಡ ಪಾಠಶಾಲೆಯಾಗಿದೆ ಎಂದು ಉಡುಪಿ ಶ್ರೀ ಅದಮಾರು ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪ್ರಾಮಾಣಿಕತೆ, ಬದ್ಧತೆ ಇರಲಿ
ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಉಡುಪಿಯ ಖ್ಯಾತ ಉದ್ಯಮಿ ವಿ.ಜಿ. ಶೆಟ್ಟಿ ಮಾತನಾಡಿ, ಸಾಧನೆ ಶೂನ್ಯದಿಂದಲೇ ಆರಂಭವಾಗುತ್ತದೆ. ಸವಾಲು ಎದುರಿಸುವ ಛಲ, ಪ್ರಾಮಾಣಿಕ ಪ್ರಯತ್ನ, ಬಲವಾದ ಬದ್ಧತೆ ನಮ್ಮನ್ನು ಸಾಧಕರ ಸಾಲಿನಲ್ಲಿ ನಿಲ್ಲಿಸುತ್ತದೆ. ಇಂಥ ಶಿಬಿರಗಳು ನಿಮ್ಮೊಳಗಿನ ಶಕ್ತಿಯನ್ನು ಗುರುತಿಸುವ ವೇದಿಕೆಯಾಗಲಿ ಎಂದರು.
ಶಿಬಿರದ ಯಶಸ್ಸಿಗೆ ಸಹಕರಿಸಿದ ಸಖಾರಾಮ ಮಧ್ಯಸ್ಥ, ಗುರುಗಳಾದ ವಿಶ್ವರೂಪ ಮಧ್ಯಸ್ಥ, ಸಂಚಿತಾ ಹಾಗೂ ಅತ್ಯುತ್ತಮ ಸ್ವಯಂಸೇವಕರಾದ ವಿವೇಕ್, ಮಾನ್ಯಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ನಡೆಸಿದ ನೀಲಾವರ ಗ್ರಾಮದ ಸಮೀಕ್ಷಾ ವರದಿಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ನೀಲಾವರ ಗ್ರಾಪಂ ಅಧ್ಯೆ ಬೇಬಿ ಅವರಿಗೆ ಹಸ್ತಾಂತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಕಾಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ್ ಹೊಳ್ಳ, ಯಕ್ಷಗಾನ ಹಾಗೂ ಭರತನಾಟ್ಯ ಗುರುಗಳಾದ ವಿಶ್ವರೂಪ ಮಧ್ಯಸ್ಥ, ಎನ್ಎಸ್ಎಸ್ ಯೋಜನಾಧಿಕಾರಿ ಡಾ.ಪ್ರಜ್ಞಾ ಮಾರ್ಪಳ್ಳಿ, ಘಟಕದ ನಾಯಕರಾದ ವಿಶ್ವಾಸ್ ಕಾರ್ವಾಲೋ, ಸಂಚಿತಾ, ತ್ರಿಷಾ ಉಪಸ್ಥಿತರಿದ್ದರು.
ಘಟಕದ ನಾಯಕ ದಿಲೀಪ್ ಕುಮಾರ್ ಸ್ವಾಗತಿಸಿದರು. ಎನ್ಎಸ್ಎಸ್ ಯೋಜನಾಧಿಕಾರಿ ಚಿರಂಜನ್ ಕೆ.ಶೇರಿಗಾರ್ ವಂದಿಸಿದರು. ನವ್ಯಾ ಕಾರ್ಯಕ್ರಮ ನಿರೂಪಿಸಿದರು.
"
ಪ್ರಕೃತಿಯ ಒಡನಾಟದಿಂದ ಕಲಿಯುವ ಎಲ್ಲ ಪಾಠಗಳೂ ಅದ್ಭುತವಾದ ಜೀವನ ರೂಪಿಸಬಲ್ಲವು. ಕಲಿಯುವುದಕ್ಕೆ ಸಿಗುವ ಇಂತಹ ಅಪೂರ್ವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಆರೋಗ್ಯಕರವಾದ ಬದುಕು ನಡೆಸಬೇಕು.