ಕಸ್ತೂರಿ ರಂಗನ್ ವರದಿಗೆ ಗ್ರಾಮ ಮಟ್ಟದ ಸಮೀಕ್ಷೆ

ವಿಧಾನಸಭೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಆಗ್ರಹ
west ghat
westernghat
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗ್ರಾಮ ಮಟ್ಟದಲ್ಲಿ ಸಮರ್ಪಕ ಭೌತಿಕ ಸಮೀಕ್ಷೆ ನಡೆಸಿ, ಜನವಸತಿ ಪ್ರದೇಶ ಹಾಗೂ ಕೃಷಿ ಜಮೀನುಗಳನ್ನು ಹೊರತುಪಡಿಸಿ ಪರಿಸರ ಸೂಕ್ಷ್ಮ ಪ್ರದೇಶದ(ಇಎಸ್‌ಎ) ವ್ಯಾಪ್ತಿಯನ್ನು ನಿಗದಿಪಡಿಸಬೇಕು. ಬಳಿಕ ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ಮಾತ್ರ ಪಶ್ಚಿಮಘಟ್ಟ ಭಾಗದ ಜನರಲ್ಲಿರುವ ಆತಂಕ ಹಾಗೂ ಗೊಂದಲಕ್ಕೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ತಿಳಿಸಿದರು.

ಪಶ್ಚಿಮಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ಜನಜೀವನ, ಕೃಷಿ ಹಾಗೂ ಅರಣ್ಯ ಪ್ರದೇಶಗಳು ಪರಸ್ಪರ ಬೆಸೆದುಕೊಂಡಿವೆ. ಜನವಸತಿ ಪ್ರದೇಶ ಹಾಗೂ ಅರಣ್ಯ ಪ್ರದೇಶವನ್ನು ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಪ್ರತ್ಯೇಕವಾಗಿ ಗುರುತಿಸದೆ ವರದಿ ಸಿದ್ಧಪಡಿಸಿರುವುದರಿಂದ ಜನರಲ್ಲಿ ಗೊಂದಲ ಉಂಟಾಗಿದೆ. 2014ರಲ್ಲಿ ವರದಿಯನ್ನು ತಿರಸ್ಕರಿಸಿ ಕೇಂದ್ರಕ್ಕೆ ಹಿಂದಿರುಗಿಸುವ ಬದಲು, ಗ್ರಾಮಗಳ ವಾಸ್ತವ ಪರಿಸ್ಥಿತಿ, ಕೃಷಿ ತೋಟಗಳು ಹಾಗೂ ಜನವಸತಿ ಪ್ರದೇಶಗಳ ಕುರಿತು ಭೌತಿಕ ಸಮೀಕ್ಷೆ ನಡೆಸಬೇಕಾಗಿತ್ತು ಎಂದು ವಿಧಾನಸಭೆಯಲ್ಲಿ ವಿವರಿಸಿದರು.

ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮೂಕಾಂಬಿಕಾ, ಸೋಮೇಶ್ವರ ಹಾಗೂ ಕುದುರೆಮುಖ ಅಭಯಾರಣ್ಯಗಳು ಒಳಗೊಂಡಿವೆ. ಈ ಪ್ರದೇಶಗಳಲ್ಲಿ ಈಗಾಗಲೇ ಪರಿಸರ ಸೂಕ್ಷ್ಮ ವಲಯ(ಇಕೋ ಸೆನ್ಸಿಟಿವ್ ಜೋನ್) ಜಾರಿಯಲ್ಲಿದ್ದು, ಪರಿಣಾಮ ಜನರು ವಿವಿಧ ಸಮಸ್ಯೆ ಎದುರಿಸುತ್ತಿದ್ದಾರೆ. ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಜನರು ತಮ್ಮ ಸ್ವಂತ ಮನೆ ನಿರ್ಮಾಣಕ್ಕೂ ಅನುಮತಿ ಪಡೆಯಲು ದೂರದ ಮೈಸೂರು ಮಟ್ಟದ ಸಮಿತಿಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಣಿಜ್ಯ ಉದ್ದೇಶದ ಭೂ ಪರಿವರ್ತನೆಗೂ ಹಲವು ನಿರ್ಬಂಧಗಳಿವೆ ಎಂದು ಸದನದ ಗಮನಕ್ಕೆ ತಂದರು.

ಇದರ ಹೊರತಾಗಿ ಇದೀಗ ಕಸ್ತೂರಿ ರಂಗನ್ ವರದಿಯಡಿ ಉಡುಪಿ ಜಿಲ್ಲೆಯ 35 ಗ್ರಾಮಗಳನ್ನು ಸೇರಿಸಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಹಾಗೂ ಪರಿಸರ ಸೂಕ್ಷ್ಮ ವಲಯ(ಇಎಸ್‌ಝಡ್)ಗಳ ವ್ಯಾಪ್ತಿ ಮತ್ತು ನಿಯಮಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ಸಮರ್ಪಕ ಮಾಹಿತಿ ನೀಡುವ ಅಗತ್ಯವಿದೆ ಎಂದರು.

ವನ್ಯಜೀವಿ ಹಾಗೂ ಮೀಸಲು ಅರಣ್ಯಗಳ ಗಡಿಗೆ ಸೀಮಿತವಾಗಿ ಬಫರ್ ಜೋನ್ ನಿಗದಿಪಡಿಸಿದರೆ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಭೌತಿಕ ಸಮೀಕ್ಷೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ಕೊಡ್ಗಿ ಆಗ್ರಹಿಸಿದರು.

ಅಗತ್ಯವಿರುವ ಪ್ರದೇಶವನ್ನಷ್ಟೇ ಸೇರಿಸಿ

20,000 ಚದರ ಕಿ.ಮೀ. ಪ್ರದೇಶವನ್ನು ಇಎಸ್‌ಎ ವ್ಯಾಪ್ತಿಗೆ ತರಲು ಪ್ರಸ್ತಾವಿಸಲಾಗಿದ್ದು, ರಾಜ್ಯದಲ್ಲಿರುವ ಸಂರಕ್ಷಿತ ಅರಣ್ಯ, ವನ್ಯಜೀವಿ ಪ್ರದೇಶ ಹಾಗೂ ಅಭಯಾರಣ್ಯಗಳನ್ನು ಒಳಗೊಂಡಂತೆ ಈಗಾಗಲೇ 16,000 ಚದರ ಕಿ.ಮೀ. ಪ್ರದೇಶ ಸಂರಕ್ಷಿತ ವ್ಯಾಪ್ತಿಯಲ್ಲಿದೆ. ಉಳಿದ ಪ್ರದೇಶವನ್ನು ಭೌತಿಕ ಸಮೀಕ್ಷೆ ಮೂಲಕ ಪರಿಶೀಲಿಸಿ, ಅಗತ್ಯವಿರುವ ಪ್ರದೇಶವನ್ನಷ್ಟೇ ಇಎಸ್‌ಎ ವ್ಯಾಪ್ತಿಗೆ ಸೇರಿಸಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net