ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದಲ್ಲಿ ಪತ್ತೆಯಾದ ವೀರಗಲ್ಲು.
Published on:
Copied
Follow Us
* ಪುರಾತತ್ತ್ವ ವಿದ್ವಾಂಸ ಪ್ರೊ. ಟಿ.ಮುರುಗೇಶಿ ಮಾಹಿತಿ
* ದ್ರಾವಿಡ ಶೈಲಿಯ ಶಿಲಾಫಲಕ, ಪಟ್ಟಿಕೆಯಲ್ಲಿದೆ ಶಿವಲಿಂಗ
ಉಡುಪಿ: ಕುಂದಾಪುರ ತಾಲೂಕಿನ ವಕ್ವಾಡಿಯ ದ್ಯಾಗಳಮನೆಯ ಆವರಣದ ಹೊರಭಾಗದಲ್ಲಿ 4 ಅಡಿ ಎತ್ತರದ ಐತಿಹಾಸಿಕ ಬೇಟೆಯ ವೀರಗಲ್ಲು ಮೇ 1ರಂದು ಪತ್ತೆಯಾಗಿದೆ. ಮೂರು ಅಂಕಣ ಒಳಗೊಂಡ ಈ ವೀರಗಲ್ಲಿನಲ್ಲಿ ಅಂದಿನ ಬೇಟೆಯ ಕುರಿತಂತೆ ಅಪರೂಪದ ಚಿತ್ರಣವಿದೆ ಎಂದು ಪುರಾತತ್ತ್ವ ವಿದ್ವಾಂಸ ಮತ್ತು ಉಡುಪಿಯ ಆದಿಮ ಕಲಾ ಟ್ರಸ್ಟ್ನ ಸ್ಥಾಪಕ ಸಂಚಾಲಕ ಪ್ರೊ. ಟಿ.ಮುರುಗೇಶಿ ಮಾಹಿತಿ ನೀಡಿದ್ದಾರೆ.
ಇದು ಆಯತಾಕಾರದ ಶಿಲಾಫಲಕವಾಗಿದ್ದು, 45 ಇಂಚು ಉದ್ದ 22.5 ಇಂಚು ಅಗಲವಾಗಿದೆ. ಮೇಲಿನ ಪಟ್ಟಿಕೆ 12.5 ಇಂಚು ಎತ್ತರ, ಮಧ್ಯದ ಪಟ್ಟಿಕೆ 17.5 ಇಂಚು ಎತ್ತರ ಹಾಗೂ ಕೆಳಗಿನ ಪಟ್ಟಿಕೆ 15 ಇಂಚು ಎತ್ತರವಾಗಿದೆ.
ದ್ರಾವಿಡ ಶೈಲಿಯ ಶಿಲ್ಪ
ವೀರಗಲ್ಲಿನ ಕೆಳಗಿನ ಅಂಕಣದಲ್ಲಿ ಇಬ್ಬರು ವೀರರು ತಮ್ಮ ಬೇಟೆಯ ನಾಯಿಗಳನ್ನು ಹಿಡಿದು ನಿಂತಿರುವ ಚಿತ್ರಣವಿದೆ. ಎರಡನೇ ಅಂಕಣದಲ್ಲಿ ಕೊಂಬಿನ ಎರಡು ಜಿಂಕೆಗಳ ಚಿತ್ರಣವಿದ್ದು, ಅದರಲ್ಲಿ ಮೇಲಿನ ಜಿಂಕೆಯ ಕೊರಳನ್ನು ಸೀಳಿದ ಬಾಣ ಅಥವಾ ಈಟಿ ಚಿತ್ರಣವಿದೆ. ಈ ಜಿಂಕೆಯ ಕೆಳಭಾಗದಲ್ಲಿ ಎಡಕ್ಕೆ ಮುಖಮಾಡಿ ನಿಂತಿರುವ ಜಿಂಕೆಯನ್ನು ಚಿತ್ರಿಸಲಾಗಿದೆ. ಜಿಂಕೆಗಳ ಬಲಭಾಗದಲ್ಲಿ ನಿಂತಿರುವ ಇಬ್ಬರು ವೀರರ ಶಿಲ್ಪಗಳಿವೆ. ಈ ವೀರಗಲ್ಲಿನ ಮೇಲಿನ ಅಂಕಣದ ಮಧ್ಯಭಾಗದಲ್ಲಿ ಎತ್ತರವಾದ ಪೀಠದ ಮೇಲೆ ಉದ್ದನೆಯ ಶಿವಲಿಂಗ ಕೆತ್ತಲಾಗಿದೆ. ಲಿಂಗದ ಮೇಲ್ಭಾಗದಲ್ಲಿ ದ್ರಾವಿಡ ಶೈಲಿಯ ದೇವಾಲಯದ ವಿಮಾನ ಚಿತ್ರಣವಿದೆ. ಈ ಲಿಂಗದ ಎಡ-ಬಲದಲ್ಲಿ ಕೈಮುಗಿದು ಕುಳಿತಿರುವ ಇಬ್ಬರು ವೀರರ ಚಿತ್ರಣವೂ ಇದೆ.
ಚಾರಿತ್ರಿಕ ಮಹತ್ವ
ಬೇಟೆಯಾಡುವುದು ಪ್ರಾಚೀನ ಕಾಲದ ರಾಜಮನೆತನಗಳ ಹವ್ಯಾಸ ಮತ್ತು ರಾಜನೀತಿಯ ಭಾಗವಾಗಿತ್ತು. ಭಾರತೀಯ ಮಹಾಕಾವ್ಯಗಳು, ಸಾಹಿತ್ಯ ಮತ್ತು ತುಳುನಾಡಿನ ಪಾಡ್ದನಗಳೆಂಬ ಜಾನಪದ ಮಹಾಕಾವ್ಯಗಳಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿಯಿದೆ. ತುಳುನಾಡಿನ ಜನಪದ ಮಹಾಕಾವ್ಯಗಳಾದ ಸಿರಿ ಪಾಡ್ದನ ಮತ್ತು ಕೋಟಿ- ಚೆನ್ನಯ ಪಾಡ್ದನಗಳಲ್ಲಿ ಬೇಟೆಯ ಚಿತ್ರಣಗಳಿವೆ. ಆದರೆ, ಐತಿಹಾಸಿಕ ದಾಖಲೆಗಳಾದ ಶಾಸನಗಳಲ್ಲಿ ಬೇಟೆಯ ಬಗ್ಗೆ ಅತ್ಯಂತ ವಿರಳವಾದ ಮಾಹಿತಿ ಇದೆ. ಹೀಗಾಗಿ ಈ ಶಿಲಾಶಾಸನಕ್ಕೆ ಬಹಳ ಚಾರಿತ್ರಿಕ ಮಹತ್ವವಿದೆ. ತುಳುನಾಡಿನಲ್ಲಿ ಕಂಡುಬಂದ 2ನೇ ಬೇಟೆಯ ವೀರಗಲ್ಲು ಇದಾಗಿದೆ ಎಂದು ಪ್ರೊ. ಮುರುಗೇಶಿ ತಿಳಿಸಿದ್ದಾರೆ.
ವೀರಗಲ್ಲಿನ ಸಂಶೋಧನಾ ಕಾರ್ಯದಲ್ಲಿ ಕವಿತಾ ಕುಲಾಲ್ ವಕ್ವಾಡಿ, ಭಂಡಾರ್ಕಾರ್ಸ್ ಕಾಲೇಜ್ನ ವಿದ್ಯಾರ್ಥಿನಿ ಉನ್ನತಿ, ವಕ್ವಾಡಿ ದ್ಯಾಗಳಮನೆ ಬಾಬುಶೆಟ್ಟಿ, ಹೇಮಾ ಶೆಟ್ಟಿ, ನಾಗರಾಜ ಆಚಾರ್ಯ, ಆದಿಮ ಕಲಾ ಟ್ರಸ್ಟ್ನ ಪ್ರದಿಪ್ ಬಸ್ರೂರು, ಗಣೇಶ್ರಾಜ್ ಸರಳೇಬೆಟ್ಟು ಮತ್ತು ರಾಘವೇಂದ್ರ ಕುಲಾಲ್ ಸಹಕರಿಸಿದರು.
8-10ನೇ ಶತಮಾನದ ಶಿಲ್ಪ ಶಾಸನ
ಈ ವೀರಗಲ್ಲಿನಲ್ಲಿ ಯಾವುದೇ ಬರವಣಿಗೆ ಇಲ್ಲ. ಕೇವಲ ಘಟನೆಯೊಂದರ ನಿರೂಪಾತ್ಮಕ ಶಿಲ್ಪವಾಗಿದ್ದು, ನಿಖರ ಕಾಲಮಾನ ನಿರ್ಣಯಿಸುವುದು ಕಷ್ಟಕರ ಕೆಲಸ. ವೀರಗಲ್ಲಿನ ಶಿಲ್ಪಗಳ ಶೈಲಿಯ ಆಧಾರದ ಮೇಲೆ ಕಾಲ ನಿರ್ಧರಿಸಬೇಕಾಗುತ್ತದೆ. ಪಟ್ಟಿಕೆಯಲ್ಲಿ ಶಿವಲಿಂಗ ಇರುವುದರಿಂದ 8-10ನೇ ಶತಮಾನದ ತುಳುನಾಡಿನ ಲಿಂಗ ಹೋಲುತ್ತದೆ. ಶಿಲ್ಪಶೈಲಿಯ ಆಧಾರದಲ್ಲಿ 9-10 ನೇ ಶತಮಾನದ ಆಳುಪರ ಕಾಲದ ವೀರಗಲ್ಲು ಎಂದು ನಿರ್ಧರಿಸಬಹುದಾಗಿದೆ.
"
ಶಾಸನದಲ್ಲಿ ಚಿತ್ರಿತವಾಗಿರುವ ಇಬ್ಬರು ವೀರರು ಸಾಮಾನ್ಯ ವ್ಯಕ್ತಿಗಳಾಗಿರದೆ ರಾಜಕುಮಾರರಂತೆ ಕಂಡುಬರುತ್ತದೆ. ಕೊರಳಲ್ಲಿ ಕಂಠಾಭರಣ, ಭುಜಕೀರ್ತಿ, ತೋಳ್ಬಂದಿ, ಕೈಕಡಗ ಮತ್ತು ಸೊಂಟದಲ್ಲಿ ಕಿರುಗತ್ತಿಗಳಿವೆ. ಒಬ್ಬ ವೀರನ ಕೈಯಲ್ಲಿ ಬಿಲ್ಲು, ಮತ್ತೊಬ್ಬನ ಕೈಯಲ್ಲಿ ಭರ್ಜಿ ಅಥವಾ ಬಾಣವಿದೆ. ವೀರರ ಮುಖದಲ್ಲಿ ಗಡ್ಡ-ಮೀಸೆಗಳಿವೆ. ಕಿವಿಯಲ್ಲಿ ಕುಂಡಲಗಳಿವೆ. ಈ ಲಕ್ಷಣಗಳು ನಿಸ್ಸಂದೇಹವಾಗಿ ರಾಜಕುಮಾರರೇ ಆಗಿರಬೇಕು. ಕೊಂಬಿನ ಜಿಂಕೆಗಳ ಬೇಟೆಯ ಸಂದರ್ಭದಲ್ಲಿ ಅವರು ಮೃತರಾಗಿರಬಹುದು. ಹೀಗಾಗಿ ಅವರನ್ನು ದೇವರ ಸನ್ನಿಧಿಯಲ್ಲಿ ಕುಳಿತಂತೆ ಚಿತ್ರಿಸಿ, ಅವರು ಸ್ವರ್ಗಸ್ಥರಾದರೆಂದು ಚಿತ್ರಿಸಿ ತೋರಿಸಲಾಗಿದೆ.