ಉಡುಪಿ: ಸೇವೆಯೇ ನಮ್ಮ ಧ್ಯೇಯವಾದರೂ ಸಹ ಸಾಂಸ್ಕೃತಿಕ ಆಚರಣೆ, ಸಾಂಪ್ರಾಯಿಕ ಹಬ್ಬ ಹಾಗೂ ವಿವಿಧ ಕಲೆಗಳನ್ನು ಪ್ರೋತ್ಸಾಹಿಸಲೂ ಸಹ ವಾರ್ಷಿಕವಾಗಿ ಆದ್ಯತೆ ನೀಡಿದ್ದೇವೆ. ಮೊಬೈಲ್ ಭರಾಟೆಯಲ್ಲಿ ಜಾನಪದವೂ ಸೇರಿ ವಿವಿಧ ಕಲೆಗಳು ಮರೆಯಾಗುತ್ತಿದ್ದು, ಅದನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಹೊರಾಂಗಣದಲ್ಲಿ ವಿಜೃಂಭಿಸುತ್ತಿದ್ದ ಕಲೆಗಳು ಇದೀಗ ಒಳಾಂಗಣದಲ್ಲಿ ಅರ್ಧ ಗಂಟೆ ಅಥವಾ ಒಂದು ತಾಸಿನ ಪ್ರದರ್ಶನಕ್ಕೆ ಸೀಮಿತವಾಗಿದೆ ಎಂದು ಲಯನ್ಸ್ ಜಿಲ್ಲೆ 317ಸಿ ಜಿಲ್ಲಾ ಗವರ್ನರ್ ಲ. ಸಪ್ನಾ ಸುರೇಶ್ ವಿಷಾದ ವ್ಯಕ್ತಪಡಿಸಿದರು.
ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಸಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ (ರಿ.) ಬೆಂಗಳೂರು, ಲಯನ್ಸ್ ಕ್ಲಬ್ ಮಲ್ಪೆ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.)ದ ವತಿಯಿಂದ ಶನಿವಾರ (ಡಿ.20) ಆಯೋಜಿಸಿದ್ದ ಜಾನಪದ ಮತ್ತು ಯಕ್ಷಗಾನ ಸಂಭ್ರಮ-2025 ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಜಿಲ್ಲಾ ಜಾನಪದ ಮತ್ತು ಯಕ್ಷಗಾನ ಸಂಯೋಜಕಿ ಲ.ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದ್ವೀತಿಯ ಉಪಜಿಲ್ಲಾ ಗವರ್ನರ್ ಲ.ಹರಿಪ್ರಸಾದ ರೈ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸುನೀಲಕುಮಾರ್ ಶೆಟ್ಟಿ, ಜಿಲ್ಲಾ ಸಂಪುಟ ಖಜಾಂಚಿ ವೈ.ಶಶಿಧರ್ ಶೆಟ್ಟಿ, ಲಯನ್ಸ್ ಕ್ಲಬ್ ಮಲ್ಪೆಯ ಅಧ್ಯಕ್ಷ ರವೀಂದ್ರ ಕರ್ಕೇರ, ಮಾಜಿ ಗವರ್ನರ್ಗಳಾದ ಡಾ.ರವೀಂದ್ರನಾಥ್ ಶೆಟ್ಟಿ, ಶ್ರೀಧರ ಶೆಣವೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ವತಿಯಿಂದ 'ದಕ್ಷಯಜ್ಞ' ಯಕ್ಷಗಾನ ಹಾಗೂ ಸಭಾ ಕಾರ್ಯಕ್ರಮದ ಬಳಿಕ 'ಕಲಾಮಯಂ' ಉಡುಪಿ ತಂಡದಿಂದ ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಿತು.
ಸಾಧಕರಿಗೆ ಸನ್ಮಾನ
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರಿಗೆ 'ತಲ್ಲೂರು ಸಂಸ್ಕೃತಿ ಸಂವರ್ಧಿನಿ' ಪ್ರಶಸ್ತಿ ಹಾಗೂ ದೈವ ನರ್ತಕ, ಜಾನಪದ ವಿದ್ವಾಂಸರಾದ ಲೋಕಯ್ಯ ಶೇರಾ ಅವರಿಗೆ 'ಶ್ರೀ ದೈವ ಕಲಾ ಪೋಷಕ ರತ್ನ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಲ.ಜಯಲಕ್ಷ್ಮೀ ಅಮೀನ್ ಹಾಗೂ ಲ.ರಘುನಾಥ್ ನಾಯಕ್ ಪ್ರಶಸ್ತಿ ಪತ್ರ ವಾಚಿಸಿದರು. ಕರ್ನಾಟಕ ಜಾನಪದ ಪರಿಷತ್ ಉಡುಪಿಯ ಪ್ರಧಾನ ಕಾರ್ಯದರ್ಶಿ ರವಿರಾಜ್ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಪುಟ ಕಾರ್ಯದರ್ಶಿ ಶಾಲಿನಿ ಡಿ. ಬಂಗೇರ ವಂದಿಸಿದರು.
"
ಉಡುಪಿ ಜಿಲ್ಲೆಯಲ್ಲಿ ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಆದರೆ, ಜಾನಪದ ಕಲೆಗಳ ಕಾರ್ಯಕ್ರಮ ವಿರಳವಾಗಿದೆ. ಸಾಮಾಜಿಕವಾಗಿ ಬದುಕುವ ಸಂದೇಶ ಹಾಗೂ ಸೇವೆ ನೀಡುವ ಲಯನ್ಸ್ ಸಂಸ್ಥೆಯು ಜಾನಪದ ಕಲೆಯ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ. ತಲ್ಲೂರ್ಸ್ ಫ್ಯಾಮಿಲಿಯು ತನ್ನ ಆದಾಯದಲ್ಲಿ ಒಂದಿಷ್ಟು ಪಾಲನ್ನು ಸಾಂಸ್ಕೃತಿಕ ಕಲೆಗಳಿಗೆ ವಿನಿಯೋಗಿಸುವುದು ಮಾದರಿಯಾಗಿದೆ.