ಕರ್ನಾಟಕದ ಕರಾವಳಿ ಭಾಗಕ್ಕೆ 'ವಂದೇ ಭಾರತ್' ರೈಲು ಸೌಲಭ್ಯ ನೀಡುವಂತೆ ಒತ್ತಾಯಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ದೆಹಲಿಯಲ್ಲಿ ಮನವಿ ಸಲ್ಲಿಸಿದರು.
Published on:
Copied
Follow Us
* ಕೇಂದ್ರ ಸಚಿವರಿಗೆ ಸಂಸದ ಕೋಟ ಮನವಿ
ಉಡುಪಿ: ಕರ್ನಾಟಕದ ಕರಾವಳಿ ಭಾಗದ ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ ಬಹುನಿರೀಕ್ಷೆಯ ಬೆಂಗಳೂರು, ಮಂಗಳೂರು ಉಡುಪಿ, ಕಾರವಾರ ಮಾರ್ಗದಲ್ಲಿ 'ವಂದೇ ಭಾರತ್' ಎಕ್ಸ್ಪ್ರೆಸ್ ರೈಲು ಸೌಲಭ್ಯವನ್ನು ತ್ವರಿತವಾಗಿ ನೀಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಶುಕ್ರವಾರ (ಡಿ.12) ಮನವಿ ನೀಡಿದರು.
ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ಕರಾವಳಿ ಭಾಗದಲ್ಲಿ 'ವಂದೇ ಭಾರತ್' ರೈಲ್ವೆಯ ಅವಶ್ಯಕತೆ ವಿವರಿಸಿದರು.
ಹಾಸನ, ಸಕಲೇಶಪುರ ಭಾಗದಲ್ಲಿ ವಿದ್ಯುದೀಕರಣ ಬಹುತೇಕ ಮುಗಿದಿದ್ದು, ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳನ್ನು ವಂದೇ ಭಾರತ್ ರೈಲ್ವೆಯ ಮೂಲಕ ಬೆಸೆಯಲು ಇದು ಸಕಾಲವಾಗಿದೆ. ಕಾರವಾರ, ಉಡುಪಿ, ಮಂಗಳೂರು ಪ್ರಯಾಣಿಕರಿಗೆ ಉತ್ತಮ ರೈಲ್ವೆ ಸೇವೆ ಒದಗಿಸಲು ಇದು ಸೂಕ್ತ ಅವಕಾಶವಾಗಿದೆ ಎಂದು ವಿನಂತಿಸಿದರು.
ಮನವಿ ಸ್ವೀಕರಿಸಿ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್, ಘಾಟಿ ಭಾಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಕಾರವಾರದವರೆಗಿನ ರೈಲ್ವೆ ಸೇವೆ ಉತ್ತಮಗೊಳಿಸಿ 'ವಂದೇ ಭಾರತ್' ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಕೋಟ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.