ಉಡುಪಿಯಲ್ಲಿ ಆಯೋಜಿಸಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮವನ್ನು ಎಂ.ಎ. ಗಫೂರ್ ಉದ್ಘಾಟಿಸಿದರು. ಅಬೀದ್ ಗದ್ಯಾಳ, ನೀಲಾವರ ಸುರೇಂದ್ರ ಅಡಿಗ, ಡಾ. ಗಣನಾಥ್ ಶೆಟ್ಟಿ ಎಕ್ಕಾರು, ದಿನಕರ್ ಹೇರೂರು, ಪೂರ್ಣಿಮಾ, ಡಾ. ನಿರಂಜನ್ ಯು.ಸಿ. ಇದ್ದರು.
Published on:
Copied
Follow Us
* ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಆಶಯ
* ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಜನ್ಮದಿನಾಚರಣೆ
ಉಡುಪಿ: ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣರ ವಚನಗಳು ಕಲ್ಯಾಣ ಕ್ರಾಂತಿಯ ನಂತರ ನಶಿಸುವ ಹಂತ ತಲುಪಿತ್ತು. ಆದರೆ, ಫ.ಗು. ಹಳಕಟ್ಟಿ ಅವರ ಅವಿರತ ಶ್ರಮದ ಲವಾಗಿ ಸಾವಿರಾರು ವಚನಗಳು ಸಂರಕ್ಷಿಸಿ ಮುದ್ರಿಸಲ್ಪಟ್ಟು ಇಂದಿಗೂ ಜನಮಾನಸದಲ್ಲಿ ಉಳಿಯುವಂತಾಗಿದೆ. ಸರ್ವಧರ್ಮ ಸಹಿಷ್ಣು ನಾಡಿನಲ್ಲಿರುವ ನಾವುಗಳು ಹೆಚ್ಚುತ್ತಿರುವ ಪಾಶ್ಚಾತ್ಯ ಸಂಸ್ಕೃತಿ ಬದಿಗಿಟ್ಟು ನಮ್ಮ ನಾಡಿನ ಆಚಾರ, ವಿಚಾರ ಪಾಲಿಸಬೇಕಿದೆ. ಅದನ್ನು ನಮ್ಮ ಪೀಳಿಗೆಯೂ ಮುಂದೆ ಅನುಸರಿಸಬೇಕಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಆಶಯ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ (ಜು.2) ಆಯೋಜಿಸಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀಮಂತವಾಯ್ತು ಕನ್ನಡ ಸಾಹಿತ್ಯ
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, 12ನೇ ಶತಮಾನದಲ್ಲಿ ಶಿವಶರಣರಿಂದ ರಚಿತಗೊಂಡು, ನಂತರ ಚದುರಿಹೋಗಿದ್ದ ವಚನ ಸಾಹಿತ್ಯಗಳನ್ನು ಫ.ಗು ಹಳಕಟ್ಟಿ ಅವರು ರಕ್ಷಿಸದೇ ಇದ್ದಿದ್ದರೆ ಕನ್ನಡ ಸಾಹಿತ್ಯ ಇಂದು ಇಷ್ಟು ಶ್ರೀಮಂತವಾಗಿ ಉಳಿಯುತ್ತಿರಲಿಲ್ಲ. ವಕೀಲ ವೃತ್ತಿಯಿಂದ ಬಂದ ಆದಾಯವನ್ನೆಲ್ಲ ಅವರು ವಚನ ಸಾಹಿತ್ಯಗಳ ಸಂರಕ್ಷಣೆ, ಪ್ರಚಾರಕ್ಕಾಗಿಯೇ ಮುಡಿಪಾಗಿಟ್ಟಿದ್ದರು. ಅವರ ಸತ್ಕಾರ್ಯದಿಂದ ಕನ್ನಡದ ಅಮೂಲ್ಯ ಹಾಗೂ ಅಜ್ಞಾತವಾಗಿ ಉಳಿದಿದ್ದ ವಚನಗ್ರಂಥ ಭಂಡಾರ ಇಂದು ವಿಶ್ವಕ್ಕೆ ಪರಿಚಯವಾಗುತ್ತಿರಲಿಲ್ಲ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಡಾ. ನಿರಂಜನ್ ಯು.ಸಿ. ಶುಭ ಹಾರೈಸಿದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ್ ಶೆಟ್ಟಿ ಎಕ್ಕಾರು, ಕನ್ನಡ ಉಪನ್ಯಾಸಕ ರಾಮಾಂಜಿ, ಜಿಲ್ಲಾಡಳಿತದ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ವಂದಿಸಿದರು.
"
ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಬೇರೂರಿದ್ದ ಸತಿಸಹಗಮನ ಪದ್ಧತಿ, ಅಸ್ಪ್ರಶ್ಯತೆ, ಜಾತಿ ಪದ್ಧತಿ ಸೇರಿದಂತೆ ಹಲವು ಮೌಢ್ಯ ಹೋಗಲಾಡಿಸುವಲ್ಲಿ ಶರಣರ ವಚನಗಳು ಕ್ರಾಂತಿಯನ್ನೇ ಮಾಡಿತ್ತು. ವಿಶೇಷವಾಗಿ ಸ್ತ್ರೀ ಸಮಾನತೆಗೆ ಒತ್ತು ನೀಡಿದ್ದವು. ಅಂತಹ ವಚನಗಳನ್ನು ರಕ್ಷಿಸಿದ 'ವಚನ ಪಿತಾಮಹ' ಖ್ಯಾತಿಯ ಫ.ಗು. ಹಳಕಟ್ಟಿ ಅವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ವಚನಗಳ ಅಧ್ಯಯನಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ. ವಚನ ಸಾಹಿತ್ಯದ ಸಾರ ಸಮಾಜಕ್ಕೆ ನಂದಾದೀಪವಾಗಿದೆ.