ಲಂಚ ಸ್ವೀಕಾರ ವಿಎ ಬಂಧನ

5 ಸಾವಿರ ರೂ. ಲಂಚ
CRIME
CRIME
Published on: 

ಕುಂದಾಪುರ: ಕಂಡ್ಲೂರಿನಲ್ಲಿ ನಿರ್ಮಾಣವಾಗಲಿರುವ ಹೋಂ ಸ್ಟೇಗೆ ನಿರಾಕ್ಷೇಪಣಾ ಪತ್ರ ನೀಡಲು 5 ಸಾವಿರ ರೂ. ಲಂಚ ಸ್ವೀಕರಿಸಿದ ಆರೋಪ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಕಚೇರಿಯ ವಿಎ ಹರೀಶ್ ಎಸ್. ಎಂಬುವರನ್ನು ಗುರುವಾರ ಸಂಜೆ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಸುರೇಶ್ ಎಂಬುವರು ನೀಡಿದ ದೂರಿನಂತೆ ಲೋಕಾಯುಕ್ತ ಪೊಲೀಸರು ಕೇಸು ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದರು. ಹೋಂಸ್ಟೇಗೆ ಎನ್‌ಒಸಿ ನೀಡಲು 5 ಸಾವಿರ ರೂ. ಲಂಚ ಕೇಳಿದ್ದು, ಅದನ್ನು ಗೂಗಲ್‌ಪೇ ಮೂಲಕ ಹಾಕುವಂತೆ ತಿಳಿಸಿದ್ದರು. ಅದರಂತೆ ಹಣ ಕಳುಹಿಸಿದ್ದಾರೆ. ಆ ದಾಖಲೆಯೊಂದಿಗೆ ಹಣ ಹಾಕಲು ಹೇಳಿದ ಮೊಬೈಲ್ ಕರೆಯ ವಾಯ್ಸ ರೆಕಾರ್ಡ್ ಮೂಲಕ ಖಚಿತಪಡಿಸಿಕೊಂಡ ಪೊಲೀಸರು ಆರೋಪಿಯ ಬಂಧನ ಕಾರ್ಯಾಚರಣೆ ಕೈಗೊಂಡಿದ್ದರು.

ಗೇರು ಹಾಡಿಯಲ್ಲಿ ದನ ಕಳವಿಗೆ ಯತ್ನ

ಕುಂದಾಪುರ: ವಾಲ್ತೂರು ಗ್ರಾಮದ ವಾಲ್ತೂರು ಕೊಕ್ಕೋಡಿಗೆ ಹೋಗುವ ದಾರಿಯ ಬಳಿ ಗೇರು ಹಾಡಿಯಲ್ಲಿ ಮೇಯುತ್ತಿದ್ದ ದನ ಕಳವು ಮಾಡಲು ಯತ್ನಿಸಲಾಗಿದೆ. ಕಾವ್ರಾಡಿ ಗ್ರಾಮದ ಹೈನುಗಾರ ಪ್ರಕಾಶ ಎಂಬುವರು ಮನೆ ಸಮೀಪ ಕೊಕ್ಕೋಡಿಗೆ ಹೋಗುವ ದಾರಿ ಬಳಿ ಗೇರು ಹಾಡಿಯಲ್ಲಿ ಮೇಯಲು ಬಿಟ್ಟಿದ್ದ ದನವನ್ನು ಇಮ್ತಿಯಾಝ್, ರಿಜ್ವಾನ್ ಯಾನೆ ದಸ್ತಗೀರ್ ಮತ್ತು ಜಿಮಾಮ್ ಎಂಬುವರು ಹಿಂಸಾತ್ಮಕವಾಗಿ ಕಾರಿಗೆ ತುಂಬಿಸಲು ಎಳೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ದಾರಿಯಲ್ಲಿ ಹೋಗುತ್ತಿದ್ದ ಹರೀಶ ಶೆಟ್ಟಿ ಅವರನ್ನು ನೋಡಿ ದನ ಬಿಟ್ಟು ಕಾರು ಮತ್ತು ಸ್ಕೂಟಿಯಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಆರೋಪಿಗಳು ಕಾವ್ರಾಡಿ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಾರನ್ನು ರಸ್ತೆ ಬದಿ ಬಿಟ್ಟು ಸ್ಕೂಟಿಯಲ್ಲಿ ಪರಾರಿಯಾಗಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ರಿಕ್ಷಾ ಡಿಕ್ಕಿಯಾಗಿ ಗಾಯ

ಕುಂದಾಪುರ: ಹಿತೇನ್ ಖಾರ್ವಿ ಎಂಬುವರು ಗಂಗೊಳ್ಳಿ ಗ್ರಾಮದ ಮೇಲ್ ಗಂಗೊಳ್ಳಿ-ಲೈಟ್ ಹೌಸ್ ರಸ್ತೆಯ ಬಳಿ ನಡೆದುಕೊಂಡು ಹೋಗುವಾಗ ಮೇಲ್ ಗಂಗೊಳ್ಳಿ ಕಡೆಯಿಂದ ಲೈಟ್ ಹೌಸ್ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ. ಪರಿಣಾಮ ಹಿತೇನ್ ಖಾರ್ವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net