ಸಾರ್ವಜನಿಕ ಉದ್ದೇಶಕ್ಕಷ್ಟೇ ಅನುದಾನ ಬಳಸಿ

 ಬಂಟ್ವಾಳ ತಾಪಂ ಸಭಾಂಗಣದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಭೆ ನಡೆಸಿದರು. ಬಿ.ರಮಾನಾಥ ರೈ, ಹರೀಶ್ ಕುಮಾರ್, ಮಮತಾ ಡಿ.ಎಸ್.ಗಟ್ಟಿ, ಬೇಬಿ ಕುಂದರ್, ಜಯಂತಿ ವಿ.ಪೂಜಾರಿ, ಅನಿಲ್ ಕುಮಾರ್ ಭೂಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ತಾಪಂ ಸಭಾಂಗಣದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಭೆ ನಡೆಸಿದರು. ಬಿ.ರಮಾನಾಥ ರೈ, ಹರೀಶ್ ಕುಮಾರ್, ಮಮತಾ ಡಿ.ಎಸ್.ಗಟ್ಟಿ, ಬೇಬಿ ಕುಂದರ್, ಜಯಂತಿ ವಿ.ಪೂಜಾರಿ, ಅನಿಲ್ ಕುಮಾರ್ ಭೂಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಎಲ್ಲ ಇಲಾಖೆ ಅಧಿಕಾರಿಗಳು ಒಬ್ಬರೊಬ್ಬರನ್ನು ದೂಷಿಸದೆ ಒಗ್ಗಟ್ಟು ಹಾಗೂ ಹೊಂದಾಣಿಕೆಯಿಂದ ಜನರಿಗೆ ಗೊಂದಲ, ತೊಂದರೆಯಾಗದಂತೆ ಕೆಲಸ ಮಾಡಬೇಕು. ಗ್ರಾಪಂಗೆ ಮೀಸಲಿರುವ ಸರ್ಕಾರದ ಅನುದಾನವನ್ನು ಸಾರ್ವಜನಿಕ ಉದ್ದೇಶಕ್ಕಷ್ಟೇ ಬಳಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಮಳೆ ಹಾನಿ ಹಿನ್ನೆಲೆಯಲ್ಲಿ ಬುಧವಾರ ಬಂಟ್ವಾಳ ತಾಪಂ ಸಭಾಂಗಣದಲ್ಲಿ ಆರೋಗ್ಯ ಮತ್ತು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಿ ಮಳೆ ಹಾನಿ ಹಾಗೂ ಇಲಾಖಾವಾರು ಮಾಹಿತಿ ಪಡೆದು ಮಾತನಾಡಿದರು.
ಅಧಿಕಾರಿಗಳು ಸರ್ಕಾರದ ಮುಖವಿದ್ದಂತೆ, ಸಮರ್ಥವಾಗಿ ಕೆಲಸ ಮಾಡಿದಾಗ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ. ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿ ಅನುದಾನ ಬಿಡುಗಡೆ ಮಾಡಿದರೂ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಜನಸಾಮಾನ್ಯರು ಜನಪ್ರತಿನಿಧಿ ಹಾಗೂ ಸರ್ಕಾರವನ್ನು ದೂಷಿಸುತ್ತಾರೆಯೇ ಹೊರತು ಅಧಿಕಾರಿಗಳನ್ನಲ್ಲ ಎಂದರು.
ಜಿಲ್ಲಾಧಿಕಾರಿ ಡಾ.ಎಚ್.ವಿ.ದರ್ಶನ್, ತಾಲೂಕಿನಲ್ಲಿ ಸಂಭವಿಸಿದ ಮಳೆ ಹಾನಿ ಹಾಗೂ ಪರಿಹಾರ ನೀಡಿದ ಕುರಿತು ವಿವರ ಕೇಳಿದರು. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ತಾಪಂ ಇಒ ಸಚಿನ್ ಕುಮಾರ್ ಉಪಸ್ಥಿತರಿದ್ದರು.

ಶೀಘ್ರ ಕೆಡಿಪಿ ಸಭೆ ಕರೆಯಲು ಮನವಿ

ಕೆಡಿಪಿ ನಾಮನಿರ್ದೇಶಿತ ಸದಸ್ಯ ಮಹಮ್ಮದ್ ನಂದಾವರ ಮಾತನಾಡಿ, ಶೀಘ್ರ ಕೆಡಿಪಿ ಸಭೆ ಕರೆಯುವಂತೆ ಮನವಿ ಮಾಡಿದರು. ಮುನ್ಸಿಪಾಲಿಟಿಗೆ ಆಡಳಿತಾಧಿಕಾರಿಯಾದ ಸಹಾಯಕ ಕಮಿಷನರ್ ಬಂದು ಪರಿಶೀಲನೆ ಮಾಡಬೇಕು ಎಂದು ಸ್ಥಳೀಯರಾದ ಸಮದ್ ಮನವಿ ಸಲ್ಲಿಸಿದರು. ರೈತ ಸಲಹಾ ಸಮಿತಿ ಆಯ್ಕೆ ಕುರಿತು ಚಂದ್ರಶೇಖರ ಭಂಡಾರಿ ಪ್ರಶ್ನಿಸಿದರು.

ತುರ್ತು ಚಿಕಿತ್ಸೆ ವ್ಯವಸ್ಥೆಗೆ ಸೂಚನೆ

ಜನ, ಜಾನುವಾರುಗಳಿಗೆ ಹಾವು ಕಚ್ಚಿದರೆ ತುರ್ತು ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಶು ವೈದ್ಯಾಧಿಕಾರಿ ಹಾಗೂ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಶಾಲಾ ಬಸ್‌ಗಳು ಸಮರ್ಪಕವಾದ ದಾಖಲೆ ಹೊಂದಿರುವಂತೆ ಹಾಗೂ ನಿಯಮಪಾಲನೆ ಮಾಡುತ್ತಿವೆಯೇ ಎಂಬುದರ ಬಗ್ಗೆ ನಿಗಾ ಇರಿಸಬೇಕು ಎಂದು ಸಚಿವ ಖಾದರ್ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net