ಬಂಟ್ವಾಳ: ಪುರಸಭೆಯ 2026-27ನೇ ಸಾಲಿನ ಮುಂಗಡ ಆಯವ್ಯಯ ತಯಾರಿಯ ಪೂರ್ವಭಾವಿ ಸಭೆ ಗದ್ದಲಕ್ಕೆ ಕಾರಣವಾಯಿತು. ಬುಧವಾರ ಪುರಸಭೆಯ ಸಭಾಭವನದಲ್ಲಿ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಕೆ.ಬಿ. ಅಧ್ಯಕ್ಷತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.
ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ಬಾಳಿಗಾ ಮಾತನಾಡಿ, 400 ವರ್ಷಗಳ ಇತಿಹಾಸವಿರುವ ಬಂಟ್ವಾಳದಲ್ಲಿ ಮೂಲ ಸೌಲಭ್ಯದ ಕೊರತೆಯಿಂದಾಗಿ ಅಭಿವೃದ್ಧಿಯಾಗದಿರುವುದು, ಗ್ರಾಮೀಣ ಭಾಗದಲ್ಲಿ ರಸ್ತೆಗಳು ಕಾಂಕ್ರೀಟೀಕರಣವಾದರೂ ಬಂಟ್ವಾಳದ ಶಾಲೆ ಸಹಿತ ಕೆಲ ರಸ್ತೆ ಕಾಂಕ್ರೀಟೀಕರಣವಾಗಿಲ್ಲ. ಕೊಟ್ರಮಣಗಂಡಿಯಲ್ಲಿ ಬಸ್ ತಂಗುದಾಣದಲ್ಲಿ ಬಸ್ ನಿಲುಗಡೆ ಸಮಸ್ಯೆ, ಬಂಟ್ವಾಳ ನಗರದಲ್ಲಿ ಶೌಚಗೃಹ ಇಲ್ಲದಿರುವುದು ಮುಂತಾದ ಸಮಸ್ಯೆ ಬಗ್ಗೆ ಗಮನ ಸೆಳೆದರು.
ಪುರಸಭೆ ಮಾಜಿ ಸದಸ್ಯ ಜಗದೀಶ್ ಕುಂದರ್ ಮಧ್ಯಪ್ರವೇಶಿಸಿ, ಇದನ್ನೆಲ್ಲ ಆ ಭಾಗದ ಕೌನ್ಸಿಲರ್ ಗಮನಕ್ಕೆ ತಂದಿಲ್ಲವೇ? ಎಂದು ಪ್ರಶ್ನಿಸಿದಾಗ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವೈಯಕ್ತಿಕ ಟೀಕೆ ಸರಿಯಲ್ಲ. ಈ ಸಭೆಯಲ್ಲಿ ಆಯವ್ಯಯಕ್ಕೆ ಸಂಬಂಧಿಸಿ ಸಲಹೆ ಮಾತ್ರ ಕೊಡಬಹುದಷ್ಟೇ ಹೊರತು ವೈಯಕ್ತಿಕ ವಿಚಾರ ಪ್ರಸ್ತಾವಿಸುವುದು ಸರಿಯಲ್ಲ ಎಂದರು.
ಈ ಸಂದರ್ಭ ಮೋಹನ್ ಚಂಡ್ತಿಮಾರ್ ಮಧ್ಯೆ ಪ್ರವೇಶಿಸಿದಾಗ ಸಭೆ ಗದ್ದಲದ ಗೂಡಾಯಿತು. ಆಗ ಸುರೇಶ್ ಬಾಳಿಗಾ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಸದಸ್ಯರೆಲ್ಲರೂ ಹಿಂದಿನಿಂದಲೂ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ಮಾತಿನ ಚಕಮಕಿ: ಇದಕ್ಕೂ ಮೊದಲು ಸುರೇಶ್ ಬಾಳಿಗಾ ಬಂಟ್ವಾಳದ ಸಮಸ್ಯೆಬ ಗ್ಗೆ ಸುದೀರ್ಘವಾಗಿ ಮಾತನಾಡುತ್ತಿದ್ದಂತೆ, ಬಿ.ಸಿ.ರೋಡ್, ಕೈಕುಂಜ ಪರಿಸರದ ಸಾಮಾಜಿಕ ಕಾರ್ಯಕರ್ತ ಹರೀಶ್ ಆಕ್ಷೇಪಿಸಿ, ಈ ಸಭೆ ಸಲಹೆಗೆ ಮಾತ್ರ ಸೀಮಿತ. ಸಾಮಾನ್ಯಸಭೆಯಲ್ಲ ಎಂದರು.
ಹದಗೆಟ್ಟಿರುವ ಕೈಕುಂಜ ರಸ್ತೆ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರಿಗೆ ತಿಳಿಸಿದಾಗ ಸಭೆಯಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಮುಂದಿನ ಬಜೆಟ್‌ನಲ್ಲಿ ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ, ನವೀಕರಣ, ಖಾತೆ ಸಹಿತ ವಿವಿಧ ಮೂಲಗಳಿಂದ 4 ಕೋಟಿ ರೂ. ಆದಾಯದ ಗುರಿ ನಿರೀಕ್ಷಿಸಲಾಗಿದೆ. ಈ ಗುರಿ ತಲುಪಿದಾಗ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಲಿದೆ.ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರವೇ ಕೆಯುಡಬ್ಲುೃಎಸ್‌ಗೆ ಹಸ್ತಾಂತರಿಸಿ, ಯೋಜನೆಯ ಪೂರ್ತಿ ನಿರ್ವಹಣೆಯನ್ನು ಅವರಿಗೆ ವಹಿಸಲಾಗುವುದು ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಸಭೆಗೆ ಮಾಹಿತಿ ನೀಡಿದರು.
ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಬಾಳಿಗಾ, ಪ್ರಮುಖರಾದ ದಾಮೋದರ ಸಂಚಯಗಿರಿ, ಸುರೇಶ್ ಬಂಗೇರ, ಲಕ್ಷ್ಮಣ್ ಪಾಣೆಮಂಗಳೂರು, ಸತೀಶ್ ಕುಮಾರ್ ಬಿ.ಸಿ.ರೋಡು, ಪ್ರೇಮನಾಥ್ ಬಂಟ್ವಾಳ, ರಾಜೇಶ್ ಭಂಡಾರಿ ಬಂಟ್ವಾಳ ಮೊದಲಾದವರಿದ್ದರು.
ಪುರಸಭೆಯ ಸಮುದಾಯ ಅಧಿಕಾರಿ ಉಮಾವತಿ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಮ್ಯಾನೇಜರ್ ರಜಾಕ್ ಉಪಸ್ಥಿತರಿದ್ದರು.
ಮೆಲ್ಕಾರ್, ಬಂಟ್ವಾಳಕ್ಕೆ ಬೇಕು ಕಾಯಕಲ್ಪ
ಬೆಳೆಯುತ್ತಿರುವ ಮೆಲ್ಕಾರ್‌ನಲ್ಲಿ ಸಾರ್ವಜನಿಕ ಶೌಚಗೃಹ, ಬಸ್ ತಂಗುದಾಣ ನಿರ್ಮಿಸುವಂತೆ ಸಾಮಾಜಿಕ ಕಾರ್ಯಕರ್ತೆ ವಸಂತಿ ಸಭೆಯ ಗಮನಸೆಳೆದರು. ಹಲವು ಬಾರಿ ಬಜೆಟ್ ಸಿದ್ಧತಾ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆಯಲಾಗಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಂಟ್ವಾಳ ಪೇಟೆಯಲ್ಲಿ ಫುಟ್‌ಪಾತ್ ವ್ಯವಸ್ಥೆ ಇಲ್ಲ. ಈ ನಿಟ್ಟಿನಲ್ಲಿ ಬಂಟ್ವಾಳ ನಗರ ಅಗಲೀಕರಣಗೊಳಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು. ಹಿಂದಿನ ಜಿಲ್ಲಾಧಿಕಾರಿಗಳಿಂದ ಸಭೆ, ಸರ್ವೇ ನಡೆದರೂ ಪ್ರಯೋಜನವಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಲಿಖಿತ ಮನವಿಯಲ್ಲಿ ತಿಳಿಸಿದರು.
ಅಕೌಂಟೆಂಡ್ ಇಲ್ಲದೆ ವಿಳಂಬ
ಬಜೆಟ್ ಮಂಡನೆಗೆ ಎರಡು ತಿಂಗಳ ಮೊದಲೇ ಪೂರ್ವಸಿದ್ಧತಾ ಸಭೆ ನಡೆಸುವುದು ವಾಡಿಕೆ. ಹಾಗೆಯೇ ಎಸ್ಸಿ-ಎಸ್ಟಿ ಮುಖಂಡರ ಸಭೆ ನಡೆಸಿ ಅವರ ಅಹವಾಲು, ಅಭಿಪ್ರಾಯ ಪಡೆಯಬೇಕಾಗುತ್ತದೆ. ಮಾರ್ಚ್ ತಿಂಗಳ ಕೊನೆಯಲ್ಲಿ ಆಡಳಿತಾಧಿಕಾರಿ ಅನುಪಸ್ಥಿತಿಯಲ್ಲಿ ಕಾಟಾಚಾರಕ್ಕೆಂಬಂತೆ ಆಯವ್ಯಯ ತಯಾರಿ ಪೂರ್ವಸಿದ್ಧತಾ ಸಭೆ ನಡೆಸುವುದು ಸರಿಯಲ್ಲ ಎಂದು ಹರಿಪ್ರಸಾದ್ ಭಂಡಾರಿಬೆಟ್ಟು ಅಸಮಾಧಾನ ವ್ಯಕ್ತಪಡಿಸಿದರು. ಅಕೌಂಟೆಂಟ್ ಇಲ್ಲದ ಕಾರಣ ಇದೀಗ ಓರ್ವರನ್ನು ಕರೆಸಿ ಅವರಿಗೆ ತರಬೇತಿ ನೀಡಿ ಆಯವ್ಯಯ ತಯಾರಿಸುವ ಸಿದ್ಧತೆ ನಡೆಸಲಾಗುತ್ತಿದೆ. ಅದರಿಂದಾಗಿ ತಡವಾಗಿದೆ ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಸಮಜಾಯಿಷಿ ನೀಡಿದರು.