ಸೌಹಾರ್ದ, ಸಹೋದರತೆಯ ಸಂದೇಶ ಪಾಲನೆ

 ಈದ್ ಮೆರವಣಿಗೆಗೆ ಗಂಡಿಬಾಗಿಲು ಮಸೀದಿ ಖತೀಬ್ ಇಲ್ಯಾಸ್ ಅರ್ಶದಿ ಚಾಲನೆ ನೀಡಿದರು. ಮದ್ರಸದ ಮುಖ್ಯಶಿಕ್ಷಕ ಹನೀಫ್ ಅರ್ಶದಿ, ಮುಅದ್ದಿಂ ಅಬೂಬಕ್ಕರ್ ದಾರಿಮಿ, ಮಸೀದಿ ಅಧ್ಯಕ್ಷ ಎಸ್.ಅಬ್ದುಲ್ ರಹಿಮಾನ್ ಮೊದಲಾದವರಿದ್ದರು.
ಈದ್ ಮೆರವಣಿಗೆಗೆ ಗಂಡಿಬಾಗಿಲು ಮಸೀದಿ ಖತೀಬ್ ಇಲ್ಯಾಸ್ ಅರ್ಶದಿ ಚಾಲನೆ ನೀಡಿದರು. ಮದ್ರಸದ ಮುಖ್ಯಶಿಕ್ಷಕ ಹನೀಫ್ ಅರ್ಶದಿ, ಮುಅದ್ದಿಂ ಅಬೂಬಕ್ಕರ್ ದಾರಿಮಿ, ಮಸೀದಿ ಅಧ್ಯಕ್ಷ ಎಸ್.ಅಬ್ದುಲ್ ರಹಿಮಾನ್ ಮೊದಲಾದವರಿದ್ದರು.
Published on

ಕಡಬ: ಪ್ರವಾದಿ ಮಹಮ್ಮದ್ ಪೈಗಂಬರರು ಸೌಹಾರ್ದ, ಸಹೋದರತೆ ಮತ್ತು ಐಕ್ಯಕ್ಕೆ ಒತ್ತು ಕೊಟ್ಟವರು. ಅವರ ಸಂದೇಶವನ್ನು ಪಾಲಿಸಿದಾಗ ಮಾತ್ರ ನೆಬಿ ದಿನ ಆಚರಣೆ ಸಾರ್ಥಕವಾಗಲು ಸಾಧ್ಯ. ಅದಕ್ಕಾಗಿ ನಾವು ಪಣತೋಡಬೇಕು ಎಂದು ಗಂಡಿಬಾಗಿಲು ಮಸೀದಿ ಖತೀಬ್ ಇಲ್ಯಾಸ್ ಅರ್ಶದಿ ಹೇಳಿದರು.

ಕೊಯಿಲ ಗ್ರಾಮದ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ವತಿಯಿಂದ ಹಮ್ಮಿಕೊಳ್ಳಲಾದ ಈದ್-ಮಿಲಾದ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.
ನೆಬಿ ಆಚರಣೆ ಹೆಸರಿನಲ್ಲಿ ಮೆರವಣಿಗೆ ಅಥವಾ ಇತರೆ ಸಂದರ್ಭಗಳಲ್ಲಿ ಅನ್ಯ ಧರ್ಮೀಯರಿಗೆ ನೋವು, ಸಂಚಾರಕ್ಕೆ ತೊಂದರೆ ಆಗದಂತೆ, ದೂಷಣೆಗೆ ಒಳಗಾದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.

ಗಂಡಿಬಾಗಿಲುನಿಂದ ಹೊರಟ ಮಿಲಾದ್ ಮೆರವಣಿಗೆ ಕೊಲ, ನೀರಾಜೆ ಮದ್ರಸದಲ್ಲಿ ಸಮಾಗಮಗೊಂಡು ಅಲ್ಲಿಂದ ಬಳಿಕ ಕೆಮ್ಮಾರ ಶಾಲಾ ಬಳಿ ತನಕ ಸಾಗಿ ಮರಳಿ ಬಂದು ಗಂಡಿಬಾಗಿಲು ಶಾಲಾ ತನಕ ಸಾಗಿ ಬಂದು ಮಸೀದಿ ಬಳಿ ಸಮಾಪನಗೊಂಡಿತು. ಮೆರವಣಿಗೆ ಬಳಿಕ ಮಸೀದಿಯಲ್ಲಿ ಮೌಲೀದ್ ಪಾರಾಯಣ, ಅನ್ನಸಂತರ್ಪಣೆ ನಡೆಯಿತು. ಬೆಳಗ್ಗೆ ಯಂಗ್‌ಮೆನ್ಸ್ ಅಧ್ಯಕ್ಷ ನಿಝಾರ್ ಧ್ವಜಾರೋಹಣ ನೆರವೇರಿಸಿದರು.

ಸಾಂಸ್ಕೃತಿಕ ಕಾರ‌್ಯಕ್ರಮ

ಮದ್ರಸ ಸಭಾಂಗಣದಲ್ಲಿ ಸೋಮವಾರ ರಾತ್ರಿ ಮದ್ರಸ ವಿದ್ಯಾರ್ಥಿಗಳಿಂದ ನೆಬಿ ಗುಣಗಾನದ ಹಾಡು, ಮತಪ್ರಭಾಷಣ, ಆಕರ್ಷಕ ದಫ್ ಕಾರ‌್ಯಕ್ರಮ ನಡೆಯಿತು. ಬಳಿಕ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮದ್ರಸದ ಮುಖ್ಯಶಿಕ್ಷಕ ಹನೀಫ್ ಅರ್ಶದಿ, ಮುಅದ್ದಿಂ ಅಬೂಬಕ್ಕರ್ ದಾರಿಮಿ, ಮಸೀದಿ ಅಧ್ಯಕ್ಷ ಎಸ್.ಅಬ್ದುಲ್ ರಹಿಮಾನ್, ಕಾರ‌್ಯದರ್ಶಿ ನಜೀರ್ ಪೂರಿಂಗ, ಉಪಾಧ್ಯಕ್ಷ ಜಿ.ಮಹಮ್ಮದ್ ರಫೀಕ್, ಖಜಾಂಚಿ ಹಸೈನಾರ್ ಹಾಜಿ, ಜತೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಮರ‌್ವೇಲ್, ಜಿ.ಅಬ್ದುಲ್ ರಜಾಕ್, ಎಸ್.ರಜಾಕ್ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net