ಟಿಪ್ಪರ್​ ಲಾರಿಗಳ ಅವೈಜ್ಞಾನಿಕ ಮಣ್ಣು ಸಾಗಾಟ

ಸಂಚಾರಿ ನಿಯಮ ಉಲ್ಲಂಘಿಸಿ ರಾ.ಹೆ.ಯಲ್ಲಿ ಸಂಚರಿಸುತ್ತಿರುವ​ ಲಾರಿ.
ಸಂಚಾರಿ ನಿಯಮ ಉಲ್ಲಂಘಿಸಿ ರಾ.ಹೆ.ಯಲ್ಲಿ ಸಂಚರಿಸುತ್ತಿರುವ​ ಲಾರಿ.
Published on

ಪ್ರಮುಖ ಮುಖ್ಯಾಂಶಗಳು

  • ದ್ವಿಚಕ್ರ ವಾಹನ ಸವಾರರಿಗೆ ತೊಂದರೆ
  • ಸ್ಥಳೀಯರಿಗೆ ಅನಾರೋಗ್ಯ ಭೀತಿ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಟಿಪ್ಪರ್​ ಲಾರಿಗಳು ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ಸಾಗಾಟ ಮಾಡುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಎಗ್ಗಿಲ್ಲದೆ ಕೆಂಪು ಮಣ್ಣು ಸಾಗಾಟ:

ಸಂಚಾರಿ ನಿಯಮ ಉಲ್ಲಂಘಿಸಿ ಚಲಿಸುತ್ತಿರುವ ಲಾರಿಯಿಂದ ರಸ್ತೆಯುದ್ದಕ್ಕೂ ಧೂಳು ಹಬ್ಬಿರುವುದು.

ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಕೆಂಪು ಮಣ್ಣು ಸಾಗಾಟದ ಟಿಪ್ಪರ್​ ಲಾರಿಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಈ ಲಾರಿಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಮಣ್ಣಿನ ಧೂಳು ಹಾರದಂತೆ ಟಾರ್ಪಾಲ್​ ಹೊದಿಸಬೇಕೆಂದು ಜಿಲ್ಲಾಡಳಿತ ಆದೇಶ ನೀಡಿದ್ದರೂ ಕೆಲವು ಟಿಪ್ಪರ್​ ಲಾರಿಗಳಲ್ಲಿ ತೋರಿಕೆಗಷ್ಟೇ ಟಾರ್ಪಾಲ್​ ಸೀಮಿತವಾಗಿದೆ.

ಆರೋಗ್ಯದ ಮೇಲೆ ಗಂಭೀರ ಪರಿಣಾಮ:

ಕೆಂಪು ಮಣ್ಣು ಸಾಗಾಟ ಮಾಡುವ ಟಿಪ್ಪರ್​ ಲಾರಿಗಳಿಂದ ಧೂಳು ಹಾರುತ್ತಿದ್ದು, ಮಣ್ಣು ರಸ್ತೆ ಮೇಲೆಲ್ಲ ಚೆಲ್ಲುತ್ತಾ ಹೋಗುತ್ತಿವೆ. ಇದರಿಂದ ಟಿಪ್ಪರ್​ ಲಾರಿಗಳ ಹಿಂದಿನಿಂದ ಬರುವ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಧೂಳೂ ಹಾರುತ್ತಿದ್ದರೆ, ರಸ್ತೆ ತುಂಬೆಲ್ಲ ಬಿದ್ದಿರುವ ಮಣ್ಣಿನ ಧೂಳು ಪ್ರಯಾಣಿಕರ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಸಂಭವಿಸುತ್ತಿವೆ ಹಲವು ಅಪಘಾತಗಳು:

ಸಂಚಾರಿ ನಿಯಮ ಉಲ್ಲಂಘಿಸಿ ಭಾರಿ ಗಾತ್ರದ ಲಾರಿಗಳು ರಾ.ಹೆ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅನೇಕ ಟಿಪ್ಪರ್​ ಲಾರಿಗಳಿಗೆ ನಂಬರ್​ ಪ್ಲೇಟ್​ ಇಲ್ಲ, ಅನೇಕ ಲಾರಿಗಳಿಗೆ ಸಿಗ್ನಲ್​ ಲೈಟ್​ ಇಲ್ಲ. ಪರಿಣಾಮ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಯಾವುದೇ ಸೂಚನೆ ನೀಡದೆ ಹಠಾತ್ತನೆ ರಸ್ತೆಯ ಅಲ್ಲಲ್ಲಿ ನಿಲ್ಲಿಸುವ ಟಿಪ್ಪರ್​ ಲಾರಿಗಳು ಅಪಘಾತಕ್ಕೆ ಕಾರಣವಾಗುತ್ತಿದ್ದು, ಸಂಚಾರಿ ನಿಯಮ ಉಲ್ಲಂಸಿ ಸಂಚರಿಸುವ ಮಣ್ಣು ಸಾಗಾಟದ ಲಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net