ಕಾಸರಗೋಡು: ಕುಂಬಳೆ- ಬದಿಯಡ್ಕ ರಸ್ತೆಯ ಸೀತಾಂಗೋಳಿ ಪೇಟೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಯಾವುದೇ ನಿಯಂತ್ರಣವಿಲ್ಲದೆ ಅಡ್ಡಾದಿಡ್ಡಿ ವಾಹನ ಸಂಚಾರದಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಂಬಳೆ, ಕಾಸರಗೋಡು, ಬದಿಯಡ್ಕ, ಪುತ್ತಿಗೆ ಮಾರ್ಗದಿಂದ ಬರುವ ವಾಹನಗಳು ಸಂಗಮಿಸುವ ಪ್ರಮುಖ ಕೇಂದ್ರ ಇದಾಗಿದ್ದು, ಮಹಿಳೆಯರು, ವೃದ್ಧರು ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ.
ಕಾಸರಗೋಡಿನಿಂದ ಸೀತಾಂಗೋಳಿಗೆ ಆಗಮಿಸುವ ಖಾಸಗಿ ಬಸ್‌ಗಳು ಸೀತಾಂಗೋಳಿ ಪೇಟೆಯ ಬಸ್ ನಿಲ್ದಾಣದ ಬಳಿ ನಿಲ್ಲುತ್ತಿವೆ. ಬದಿಯಡ್ಕದಿಂದ ಬರುವ ಬಸ್‌ಗಳು, ಪುತ್ತಿಗೆ ಮಾರ್ಗವಾಗಿ ಪೆರ್ಲದಿಂದ ಬರುವ ಬಸ್‌ಗಳೂ ಇದೇ ಬಸ್ ನಿಲ್ದಾಣದ ಸಮೀಪದಲ್ಲೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸುತ್ತಿವೆ. ಇದೇ ಬಸ್ ನಿಲ್ದಾಣದ ಎದುರು ಭಾಗದಲ್ಲಿ ಕುಂಬಳೆಯಿಂದ ಬದಿಯಡ್ಕ, ಮುಳ್ಳೇರಿಯ ಭಾಗಕ್ಕೆ ತೆರಳುವ ಬಸ್‌ಗಳೂ ಬಂದು ನಿಲ್ಲುತ್ತಿವೆ. ಭಾರಿ, ಲಘು ವಾಹನಗಳು ಸೀತಾಂಗೋಳಿ ಪೇಟೆಯ ಮುಖ್ಯ ವೃತ್ತ ಸುತ್ತುವರಿದು ಹೋಗುವುದರಿಂದ ಪೇಟೆಯಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತಿದೆ.
ರಸ್ತೆ ದಾಟಲು ಹರಸಾಹಸ: ವಾಹನಗಳ ದಟ್ಟಣೆಯಿಂದ ಇಲ್ಲಿ ಪ್ರಯಾಣಿಕರಿಗೆ ರಸ್ತೆ ಅಡ್ಡ ದಾಟುವುದು ಸಾಹಸದ ಕೆಲಸ. ಕುಂಬಳೆಯಿಂದ ಬದಿಯಡ್ಕ ಹಾದಿಯಾಗಿ ಕುಂಬಳೆಗಿರುವ ಪ್ರಸಕ್ತ ರಸ್ತೆ ಸಮಗ್ರ ಅಭಿವೃದ್ಧಿಗೊಳಿಸಿದ್ದರೂ, ಸೀತಾಂಗೋಳಿ ಪೇಟೆಯಲ್ಲಿ ಸಂಚಾರಿ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಬೇಕೆಂದು ಸ್ಥಳೀಯ ವ್ಯಾಪಾರಿಗಳು ಹಾಗೂ ನಾಗರಿಕರು ಹೇಳುತ್ತಾರೆ.
ಸೀತಾಂಗೋಳಿ ಪೇಟೆಯಿಂದ ಅನತಿ ದೂರದಲ್ಲಿ ಕೇಂದ್ರ ಸರ್ಕಾರದ ಅಧೀನದ ಎಚ್‌ಎಎಲ್ ಹಾಗೂ ಕಿನ್‌ಫ್ರಾ ಕೈಗಾರಿಕಾ ಪ್ರಾಂಗಣವಿದ್ದು, ಸಹಜವಾಗಿ ಕಾಸರಗೋಡು-ಸೀತಾಂಗೋಳಿ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ.
ಸಿಸಿ ಕ್ಯಾಮರಾ ಸ್ತಬ್ಧ
ಪೇಟೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಸ್ತಬ್ಧಗೊಂಡು ಎಷ್ಟೋ ಸಮಯವಾಗಿದೆ. ಕುಂಬಳೆ ಪೊಲೀಸ್ ಠಾಣೆ ಅಧೀನದಲ್ಲಿ ಔಟ್‌ಪೋಸ್ಟ್ ಕಾರ್ಯಾಚರಿಸುತ್ತಿದ್ದರೂ, ಪೇಟೆಯ ವಾಹನ ದಟ್ಟಣೆ ಪರಿಹರಿಸುವಲ್ಲಿ ಇಲ್ಲಿನ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂಬ ದೂರು ವ್ಯಾಪಕಗೊಂಡಿದೆ. ಈ ಹಿಂದೆ ಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಬಸ್‌ಗಳ ಟೈಮ್ ಕೀಪರ್‌ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಟೈಮ್‌ಕೀಪರ್‌ಗಳಿಲ್ಲದಿರುವುದರಿಂದ ಕೆಲವು ಬಸ್‌ಗಳು ವಿಳಂಬವಾಗಿ ಹಾಗೂ ಪೈಪೋಟಿಯೊಂದಿಗೆ ಸಂಚರಿಸುತ್ತಿರುವುದಾಗಿಯೂ ದೂರಲಾಗುತ್ತಿದೆ.
ಪೇಟೆಯ ರಸ್ತೆ ಅಂಚಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಕಡಿವಾಣ ಹಾಕಬೇಕು. ಬಸ್‌ಗಳ ಪೈಪೋಟಿಯ ಸಂಚಾರವನ್ನು ನಿಯಂತ್ರಿಸಬೇಕು. ಸಂಚಾರ ವ್ಯವಸ್ಥೆ ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಔಟ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಅಗತ್ಯ ಕ್ರಮ ಕೈಗೊಳ್ಳಬೇಕು.