ಉಡುಪಿ: ಕ್ರೈಸ್ತ ಧರ್ಮಸಭೆ ಯಾವಾಗಲೂ ಏಕತೆಯ ಮಹತ್ವ ಸಾರುತ್ತದೆ. 2ನೇ ವ್ಯಾಟಿಕನ್ ಮಹಾಸಭೆಯಲ್ಲಿ ಎಲ್ಲ ಕ್ರೈಸ್ತರ ಏಕತೆ ಪುನರ್ ಸ್ಥಾಪಿಸುವುದು ಪ್ರಮುಖ ಕಾಳಜಿಯಾಗಿತ್ತು. ನೈಸಿಯಾ ಘೋಷಣೆಯು ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯವಾಗಿದೆ. ಯಾವುದೇ ಸಭೆಗಳಿಗೂ ಸೇರಿದ್ದರೂ ಸಹ ಒಂದೇ ವಿಶ್ವಾಸದ ಘೋಷಣೆಯು ಏಕತೆ ಪ್ರಚುರಪಡಿಸಿದಂತಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.
ಉಡುಪಿಯ ಯುಬಿಎಂ ಜುಬಿಲಿ ಮೆಮೋರಿಯಲ್ ಸಭಾಂಗಣದಲ್ಲಿ ಯುನೈಟೆಡ್ ಬಾಸೆಲ್ ಮಿಷನ್ ಚರ್ಚ್, ಉಡುಪಿ ಧರ್ಮಪ್ರಾಂತ್ಯದ ಐಕ್ಯತಾ ಆಯೋಗ ಮತ್ತು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಆಶ್ರಯದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ನೈಸಿಯಾ ವಿಶ್ವಾಸದ ಘೋಷಣೆ ಒಡಬಂಡಿಕೆಯ 1700ನೇ ವರ್ಷಾಚರಣೆ ನಿಮಿತ್ತ ಗುರುವಾರ (ಮಾ.19) ಸಂಜೆ ಆಯೋಜಿಸಿದ್ದ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಮಾತನಾಡಿದರು.
ವಿಶ್ವಾಸದ ಭದ್ರ ಬುನಾದಿ
ಚರ್ಚ್ ಆಫ್ ಸೌತ್ ಇಂಡಿಯಾ ಕರ್ನಾಟಕ ಸದರ್ನ್ ಡಯಾಸಿಸ್ನ ಧರ್ಮಾಧ್ಯಕ್ಷ ಅತಿ ವಂ.ಹೇಮಚಂದ್ರಕುಮಾರ್ ಮಾತನಾಡಿ, ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತರು ದೇವರಲ್ಲಿ ಇಟ್ಟಿರುವ ವಿಶ್ವಾಸ ಭದ್ರ ಬುನಾದಿಯಾಗಿದೆ. 1700 ವರ್ಷದ ಬಳಿಕವೂ ಕ್ರೈಸ್ತರೆಲ್ಲ ಒಟ್ಟಾಗಿ ಬದುಕಲು ಪ್ರೇರೇಪಿಸುತ್ತಿದೆ. ಯಾವ ರೀತಿಯಲ್ಲಿ ಕ್ರೈಸ್ತ ಸಭೆ ಬಲಪಡಿಸಲು ಸಾಧ್ಯ ಎನ್ನುವುದು ಬೈಬಲ್ನಲ್ಲಿ ವಿವಿಧೆಡೆ ಉಲ್ಲೇಖಿಸಲಾಗಿದೆ. ನಮ್ಮ ಸಭೆಗಳಲ್ಲಿ ವಿಶ್ವಾಸದ ಮಂತ್ರ ಪಠಿಸುವುದರಿಂದ ನಮ್ಮಲ್ಲಿನ ಏಕತೆ ಇನ್ನಷ್ಟು ಭದ್ರಪಡಿಸಲು ಸಹಕಾರಿ ಎಂದರು.
ಗೋವಾ ಡಿವೈನ್ ಸಿಂಗ್ ಧ್ಯಾನ ಮಂದಿರದ ಮುಖ್ಯಸ್ಥ ವಂ.ರೊವಲ್ ಶುಭದೀಪ್ ಡಿಸೋಜಾ ಮತ್ತು ಕರ್ನಾಟಕ ಥಿಯೋಲೋಜಿಕಲ್ ಕಾಲೇಜ್ ಬಲ್ಮಠ ಮಂಗಳೂರಿನ ಪ್ರಾಂಶುಪಾಲ ವಂ.ಡಾ. ಎಚ್.ಎಂ. ವಾಟ್ಸನ್ ಅವರು ನೈಸಿಯಾ ವಿಶ್ವಾಸದ ಘೋಷಣೆಯ ಐತಿಹಾಸಿಕ ಚರಿತ್ರೆ ಮತ್ತು ಆಧ್ಯಾತ್ಮಿಕ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ವಂ.ಸಂತೋಷ್, ಭಗಿನಿ ಪ್ರಿಯಾ ತಂಡದಿಂದ ವಿಶ್ವಾಸ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ವಂ.ಲಿಯೋ ಪ್ರವೀಣ್, ವಂ.ಪ್ರವೀಣ್ ಮಾಬೆನ್, ವಂ.ನೊಯೆಲ್ ಲೂವಿಸ್, ಪ್ರಶಾಂತ್ ಜತ್ತನ್ನ, ರೋಮನ್ ಕ್ಯಾಥೊಲಿಕ್, ಓಥೋರ್ಡಕ್ಸ್, ಸಿಎಸ್ಐ, ಯುಬಿಎಂ ಸಭೆಗಳ ಧರ್ಮಗುರುಗಳು, ಪಾಸ್ಟರ್ಸ್, ಧರ್ಮಭಗಿನಿಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ನಿಜವಾದ ಏಕತೆ ಆತ್ಮಿಕ ಪರಿವರ್ತನೆಯಿಂದ ಆರಂಭವಾಗುತ್ತದೆ. ವಿನಯ, ಪರಸ್ಪರ ಕ್ಷಮೆ ಮತ್ತು ಒಟ್ಟಾಗಿ ಪ್ರಾರ್ಥಿಸಿದಾಗ ಮಾತ್ರ ನೈಜ ಏಕತೆ ಕಾಣಲು ಸಾಧ್ಯ. ಉಡುಪಿ ಪ್ರದೇಶದ ಕ್ರೈಸ್ತ ಸಭೆಗಳು ವಿವಿಧ ಪರಂಪರೆಯ ಸುಂದರ ತಾಣವಾಗಿದೆ. ಇಲ್ಲಿ ಒಟ್ಟಾಗಿ ಜೀವಿಸುವುದಲ್ಲದೆ ಎಲ್ಲರೂ ಒಂದಾಗಿ ಪ್ರಾರ್ಥಿಸುತ್ತೇವೆ.