ಉಡುಪಿ ಮಠದೊಳಗೆ ನವಗ್ರಹ ಕಿಂಡಿಯ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಶ್ರೀಕೃಷ್ಣನ ದರ್ಶನ ಮಾಡಿದರು. ಡಾ.ಉದಯಕುಮಾರ್ ಸರಳತ್ತಾಯ, ಗುರ್ಮೆ ಸುರೇಶ್ ಶೆಟ್ಟಿ ಇದ್ದರು.
Published on:
Copied
Follow Us
* ಉಡುಪಿ ಮಠಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
* ರಾಷ್ಟ್ರದ ಹಿತಕ್ಕಾಗಿ ವಿವಿಧ ದೇವರಲ್ಲಿ ಪ್ರಾರ್ಥನೆ
ಉಡುಪಿ: ಶನಿವಾರ (ಜೂ.13) ಬೆಳ್ಳಂಬೆಳಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವಿಧ ದೇಗುಲಗಳಿಗೆ ಭೇಟಿ ನೀಡಿ ರಾಷ್ಟ್ರದ ಒಳಿತಿಗಾಗಿ ಉಡುಪಿಯ ವಿವಿಧ ದೇವರಲ್ಲಿ ಪ್ರಾರ್ಥನೆ ಮಾಡಿದರು.
ಬೆಳಗ್ಗೆ 8 ಗಂಟೆಗೆ ಕಾಪು ಮಾರಿಗುಡಿಗೆ ತೆರಳಿ ದೇವಿಯ ದರ್ಶನ, ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ 8:45ಕ್ಕೆ ಉಡುಪಿಗೆ ಆಗಮಿಸಿದರು.
ಉಡುಪಿಯ ಅನಂತೇಶ್ವರ ದೇಗುಲದಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡಿದ ನಿರ್ಮಲಾ ಸೀತಾರಾಮನ್.
ಮೊದಲಿಗೆ ರಥಬೀದಿಯಲ್ಲಿರುವ ಶ್ರೀ ಅನಂತೇಶ್ವರ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು. ಅರ್ಚಕರಿಂದ ವಿಶೇಷ ಪೂಜೆಯ ಪ್ರಸಾದ ಸ್ವೀಕರಿಸಿದರು. ಈ ವೇಳೆ ದೇವಾಲಯದ ಪ್ರಧಾನ ಅರ್ಚಕ ವಿದ್ವಾನ್ ವೇದವ್ಯಾಸ ಐತಾಳ್ ಸಚಿವೆ ನಿರ್ಮಲಾ ಅವರಿಗೆ ದೇವಾಲಯದ ಪೌರಾಣಿಕ ಹಿನ್ನೆಲೆ ಹಾಗೂ ಮಧ್ವಾಚಾರ್ಯರ ಕುರಿತಾಗಿ ವಿವರಿಸಿದರು. ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಇದ್ದರು. ನಂತರ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
ಕನಕನ ಕಿಂಡಿಗೆ ಭೇಟಿ
ಕನಕನ ಕಿಂಡಿಯಿಂದ ಶ್ರೀಕೃಷ್ಣನ ದರ್ಶನದಿಂದ ಸಕಲ ತಾಪತ್ರಯ ಪರಿಹಾರ ಆಗುತ್ತದೆಂಬ ನಂಬಿಕೆಯಿದ್ದು, ಸಚಿವೆ ನಿರ್ಮಲಾ ಅವರೂ ಸಹ ಕನಕನ ಕಿಂಡಿಯತ್ತ ಧಾವಿಸಿ ಅಲ್ಲಿಂದ ಶ್ರೀಕೃಷ್ಣನ ದರ್ಶನ ಮಾಡಿದರು. ಇಲ್ಲಿಂದ ಉಡುಪಿ ಮಠಕ್ಕೆ ತೆರಳಿದರು.
ಮಠದಿಂದ ಸ್ವಾಗತ
ಶ್ರೀಕೃಷ್ಣ ಮಠದ ದ್ವಾರದಲ್ಲಿ ಪರ್ಯಾಯ ಶೀರೂರು ಮಠದ ವತಿಯಿಂದ ಸಚಿವೆ ನಿರ್ಮಲಾ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಮಲ್ಲಿಗೆ ಹೂವಿನ ಹಾರ ನೀಡಿ ಬರಮಾಡಿಕೊಳ್ಳಲಾಯಿತು. ಬಳಿಕ ನವಗ್ರಹಗಳ ದೋಷ ಪರಿಹಾರಕ್ಕಾಗಿ ಮಠದೊಳಗಿರುವ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು, ರಾಷ್ಟ್ರಕ್ಕೆ ಎದುರಾಗಿರುವ ಸಕಲ ಬಿಕ್ಕಟು ನಿವಾರಿಸು ಎಂಬಂರ್ಥದಲ್ಲಿ ಕೈಮುಗಿದು ನಿಂತು ಕೆಲಕ್ಷಣ ದೇವರಲ್ಲಿ ಪ್ರಾರ್ಥಿಸಿದರು.
ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಮಠದ ಪಾರುಪತ್ತೆಗಾರ ಶ್ರೀಶ ಆಚಾರ್ಯ ಕಡೆಕಾರು, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಧುಕರ್ ಮುದ್ರಾಡಿ, ಮಠದ ಆಡಳಿತಾಧಿಕಾರಿ ವೆಂಕಟರಮಣ ಮುಚ್ಚಿಂತಾಯ, ಮೆನೇಜರ್ ವಾಸುದೇವ್ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.
ಪರ್ಯಾಯ ಶ್ರೀಗಳಿಂದ ಮಂತ್ರಾಕ್ಷತೆ ಸ್ವೀಕಾರ
ಸರ್ವಜ್ಞ ಪೀಠದಲ್ಲಿ ಆಸೀನರಾದ ಪರ್ಯಾಯ ಶೀರೂರು ಮಠದ ವೇದವರ್ಧನ ಶ್ರೀಗಳಿಂದ ನಿರ್ಮಲಾ ಸೀತಾರಾಮನ್ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ಶ್ರೀಕೃಷ್ಣನ ದರ್ಶನದ ಬಳಿಕ ಸಚಿವೆ ನಿರ್ಮಲಾ ಅವರು ನಿತ್ಯ ದೇವರಿಗೆ ಸಮರ್ಪಿಸುವ ಮೊಸರು ಹಾಗೂ ಹಾಲು ಕಾಯಿಸಲು ಮಠದೊಳಗೆ ನಿರ್ಮಿಸಿರುವ ವಿಶೇಷ ಅಡುಗೆ ಮನೆ (ಪಾಯದ ಕೋಣೆ) ಉದ್ಘಾಟಿಸಿದರು. ಈ ವೇಳೆ ಮಠದ ವತಿಯಿಂದ ನೀಡಿದ ಪ್ರಸಾದ ಸ್ವೀಕರಿಸಿದರು. ತದನಂತರ ಸ್ವರ್ವಜ್ಞ ಪೀಠದಲ್ಲಿ ಆಸೀನರಾಗಿದ್ದ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ಉಡುಪಿ ಶ್ರೀಕೃಷ್ಣ ಮಠದೊಳಗೆ ನಿರ್ಮಿಸಿರುವ ವಿಶೇಷ ಅಡುಗೆ ಮನೆ (ಪಾಯದ ಕೋಣೆ)ಯನ್ನು ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ವೇದವರ್ಧನ ಶ್ರೀ, ಡಾ.ಉದಯಕುಮಾರ್ ಸರಳತ್ತಾಯ, ಗುರ್ಮೆ ಸುರೇಶ್ ಶೆಟ್ಟಿ, ಶ್ರೀಶ ಆಚಾರ್ಯ ಕಡೆಕಾರು ಇತರರಿದ್ದರು.