ಅಭಿವೃದ್ಧಿ ಕಾಣದ ಬಾಳಿಕೆರೆ ಕಾಲನಿ

 ಅಭಿವೃದ್ಧಿ ಕಾಣದ ಬಾಳಿಕೆರೆ ಕಾಲನಿ ರಸ್ತೆಯ ಸ್ಥಿತಿ.
ಅಭಿವೃದ್ಧಿ ಕಾಣದ ಬಾಳಿಕೆರೆ ಕಾಲನಿ ರಸ್ತೆಯ ಸ್ಥಿತಿ.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸುತ್ತಮುತ್ತಲಿನ ರಸ್ತೆಗಳೆಲ್ಲ ಡಾಂಬರು ಮತ್ತು ಕಾಂಕ್ರೀಟ್ ಹೊದಿಕೆ ಹೊದ್ದು ಅಭಿವೃದ್ಧಿಯ ಗುರುತು ಮೂಡಿಸಿಕೊಂಡಿದ್ದರೆ, ಈ ಕಾಲನಿಗೆ ಮಾತ್ರ ಆ ಭಾಗ್ಯ ಇನ್ನೂ ಕೂಡಿಬಂದಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ. ಹದಗೆಟ್ಟ ರಸ್ತೆಯಲ್ಲೇ ನಿತ್ಯ ಸಂಚರಿಸುವ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು.
ಇದು ಕಟ್‌ಬೆಲ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಿಕೆರೆ ಕಾಲನಿಯ ಪರಿಸ್ಥಿತಿ. 25 ವರ್ಷಗಳಿಂದ ರಸ್ತೆ ಅಭಿವೃದ್ಧಿ ನಿರೀಕ್ಷೆಯಲ್ಲಿರುವ ಇಲ್ಲಿನ ನಿವಾಸಿಗಳು ಪ್ರತಿ ದಿನ ದುಸ್ಥಿತಿಯ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ.
1998ರಲ್ಲಿ ಗೋಪಾಲ ಪೂಜಾರಿ ಅವರು ಮೊದಲ ಬಾರಿಗೆ ಶಾಸಕರಾಗಿದ್ದ ಅವಧಿಯಲ್ಲಿ ಬೆಳ್ಳಿ ಬೆಳಕು ಯೋಜನೆಯಡಿ ಬಾಳಿಕೆರೆ ಕಾಲನಿ ನಿರ್ಮಾಣಗೊಂಡಿತ್ತು. ಬಳಿಕ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳು ಕಲ್ಪಿಸಲ್ಪಟ್ಟರೂ ರಸ್ತೆ ಅಭಿವೃದ್ಧಿ ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದೆ.

ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ

ಬಾಳಿಕೆರೆ ಕಾಲನಿಯ ನಾಲ್ಕು ಒಳರಸ್ತೆಗಳು ಇದುವರೆಗೂ ಡಾಂಬರು ಅಥವಾ ಕಾಂಕ್ರೀಟ್ ಭಾಗ್ಯ ಕಂಡಿಲ್ಲ. ಪರಿಣಾಮ ಮಳೆಗಾಲ ಬಂದರೆ ರಸ್ತೆಗಳು ಕೆಸರಿನ ಕೆಸರುಮಯವಾಗಿ, ಅಲ್ಲಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿ ಮಳೆನೀರು ನಿಂತುಕೊಳ್ಳುತ್ತದೆ. ಅದರಿಂದ ಸ್ಥಳೀಯರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

32 ಮನೆಗಳು, 150 ಜನರು

ಹೆಮ್ಮಾಡಿ ಕೊಲ್ಲೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬಾಳಿಕೆರೆ ಕಾಲನಿಯಲ್ಲಿ ಒಂದು ಕಿ.ಮೀ. ವ್ಯಾಪ್ತಿಯ ನಾಲ್ಕು ಒಳರಸ್ತೆಗಳಿದ್ದು, ಅವು ಇಂದಿಗೂ ಮಣ್ಣಿನ ರಸ್ತೆಗಳಾಗಿಯೇ ಉಳಿದಿವೆ. ಈ ರಸ್ತೆಗಳ ಎರಡೂ ಬದಿಯಲ್ಲಿ 32 ಮನೆಗಳಿದ್ದು, 150ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಸ್ಥಳೀಯರು ಪ್ರತಿ ದಿನ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಶಿಫಾರಸಿನ ಮೇರೆಗೆ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಲಭ್ಯವಿರುವ ಅನುದಾನದ ಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಈಗಾಗಲೇ ಜಿಪಿಎಸ್ ಪರಿಶೀಲನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ಮಾಹಿತಿಯಿದೆ.

— ಶರತ್‌ಕುಮಾರ ಶೆಟ್ಟಿ ರೈತ ಮುಖಂಡರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net