ಡೇವಿಡ್​ ಕೊಲೆ ಪ್ರಕರಣದಲ್ಲಿ ಭೂಗತ ನಂಟು: ಹರಿರಾಮ್​ ಶಂಕರ್

ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on
ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್​ ಡಿಸೋಜಾ ಕೊಲೆ ಪ್ರಕರಣದಲ್ಲಿ ಭೂಗತ ಲೋಕದ ನಂಟು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕಾಮಗಾರಿ ವಿವಾದ ತನಿಖೆಯಿಂದ ಬಯಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಮುನ್ನ ಯುಪಿಸಿಎಲ್​ ಉದ್ಯೋಗಿಗಳಿಗೆ ಹಾಗೂ ಡೇವಿಡ್​ ಡಿಸೋಜಾ ಅವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ಬಾಂಬೆ ಮೂಲದ ಅಂಡರ್​ವರ್ಲ್ಡ್​ ಡಾನ್​ ಹೇಮಂತ್​ ಪೂಜಾರಿ ಮಾತನಾಡುತ್ತಿರುವುದಾಗಿ ಬೆದರಿಕೆ ಹಾಕಿದ್ದ. ಪೈಪ್​ಲೈನ್​ ಯೋಜನೆ ಗುತ್ತಿಗೆಯನ್ನು ತಮ್ಮ ಕಿಶೋರ್​ ಪೂಜಾರಿಗೆ ನೀಡಬೇಕೆಂದು ಒತ್ತಡ ಹೇರಿದ್ದ ಎಂದು ಮಾಹಿತಿ ನೀಡಿದ್ದಾರೆ.
ಗುತ್ತಿಗೆ ವೈಮನಸ್ಸು
ಖಾಸಗಿ ಗುತ್ತಿಗೆದಾರ ಕಿಶೋರ್​ ರಾಮ್​ ಪೂಜಾರಿ ಈ ಹಿಂದೆ ಯುಪಿಸಿಎಲ್​ನಲ್ಲಿ ಕಾಮಗಾರಿ ನಡೆಸಿದ್ದ. ಪೈಪ್​ಲೈನ್​ ಹಾಗೂ ಕಾಂಕ್ರೀಟ್​ ರಸ್ತೆ ನಿಮಾರ್ಣದ ಭಾರಿ ಮೌಲ್ಯದ ಯೋಜನೆ ತನಗೇ ಸಿಗಬೇಕೆಂದು ಬಯಸಿದ್ದ. ಆದರೆ ಈ ಪ್ರಾಜೆಕ್ಟ್​ ಸಿಗದಿದ್ದಾಗ, ಡೇವಿಡ್​ ಡಿಸೋಜಾ ಹಾಗೂ ಸಂಸ್ಥೆಯ ಮೇಲೆ ವೈಮನಸ್ಸು ಬೆಳೆಸಿಕೊಂಡು ದಾಳಿಗೆ ಸಂಚು ರೂಪಿಸಿ, ಹೇಮಂತ್​ ಪೂಜಾರಿ ಎಂಬ ವ್ಯಕ್ತಿಯ ನೆರವಿನೊಂದಿಗೆ ಸುಪಾರಿ ನೀಡಿದ್ದನು ಎಂದು ತಿಳಿಸಿದರು.
ಆರೋಪಿಗಳ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ ಉತ್ತರ ಪ್ರದೇಶ ಶೂಟರ್​ ರಾಜು , ಮಹಾರಾಷ್ಟ್ರದ ಅನ್ಮೋಲ್​ ರಸ್ತೋಗಿ ಮತ್ತು ಬಿಹಾರ ಜಿಯಾವುಲ್​ ವಜುಲ್​ ಶೇಖ್​ ಅಲಿಯಾಸ್​ ಎ.ಎಸ್​. ದೀಪಕ್​ ಎಂಬ ಮೂವರು ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಆಕ್ರಮಣ ಮಾಡಲು ಯತ್ನಿಸಿದ ಶೂಟರ್​ ರಾಜು ಕಾಲಿಗೆ ಫೈರಿಂಗ್​ ನಡೆಸಿ ವಶಕ್ಕೆ ಪಡೆಯಲಾಗಿದೆ. ಬಿಹಾರ ಮೂಲದ ಅನುಜ್​ ಪಾಟೀಲ್​ ಶಾರ್ಪ್​ಶೂಟರ್​ಗಳನ್ನು ಕಿಶೋರ್​ಗೆ ಪರಿಚಯಿಸಿದ್ದನು. ಈತ ಮಹಾರಾಷ್ಟ್ರ, ಗುಜರಾತ್​, ಹರಿಯಾಣ ಹಾಗೂ ದೆಹಲಿ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಅಪರಾಧ ಸಿಂಡಿಕೇಟ್​ ನಡೆಸುತ್ತಿದ್ದ ಎಂದು ತಿಳಿಸಿದರು.
ಕೃತ್ಯ ನಡೆದ ತಕ್ಷಣ ಆರೋಪಿಗಳ ಖಾತೆಗೆ ಶಂಕಾಸ್ಪದವಾಗಿ ಹಣ ಬಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಆರ್ಥಿಕ ವಹಿವಾಟನ್ನು ಬೆನ್ನಟ್ಟಿದಾಗ ಇರ್ಷಾದ್​, ಚಿರಾಗ್​ ಪೂಜಾರಿ, ಸದಾನಂದ್​ ದೇವಾಡಿಗ ಹಣದ ವ್ಯವಸ್ಥೆ ಮಾಡಿಕೊಟ್ಟಿರುವುದು ಗೊತ್ತಾಗಿದೆ ಎಂದು ಹೇಳಿದರು. ಅಡಿಶನಲ್​ ಎಸ್​ಪಿ ಸುಧಾಕರ್​ ನಾಯಕ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net